

ಮಂಡ್ಯ: ರೈತರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಗ್ರಾಮಮಟ್ಟದಲ್ಲಿಯೇ ಪೌತಿ ಖಾತೆ ಆಂದೋಲನ ರೂಪಿಸಲಾಗಿದೆ. ಅದರಂತೆ ಗ್ರಾಮಕ್ಕೆ ಬಂದು ಪೌತಿ ಖಾತೆ ಸಮಸ್ಯೆಯನ್ನು ಬಗೆ ಹರಿಸಲಾಗುವುದು ಎಂದು ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಹೇಳಿದರು.
ತಾಲೂಕಿನ ತಗ್ಗಹಳ್ಳಿ ಗ್ರಾಮದ ಕಾಳಮ್ಮ ದೇವಸ್ಥಾನದ ಆವರಣದಲ್ಲಿ ಕಂದಾಯ ಇಲಾಖೆ, ತಾಲೂಕು ಆಡಳಿತದಿಂದ ಆಯೋಜಿಸಿದ್ದ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 15,000ಕ್ಕಿಂತ ಹೆಚ್ಚು ಆರ್‌ಟಿಸಿ ಮೃತ ಖಾತೆದಾರರ ಹೆಸರಿನಲ್ಲಿಯೇ ಮುಂದುವರೆದಿವೆ. ಅದೆ ರೀತಿ ಮಂಡ್ಯ ತಾಲೂಕಿನಲ್ಲೂ ಇವೆ. ಅದಕ್ಕಾಗಿ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಂದು ಪೌತಿ ಖಾತೆ ಮಾಡಿಕೊಡಲಾಗುವುದು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ರೈತಾಪಿ ವರ್ಗದವರು ಹಾಗೂ ಫಲಾನುಭವಿಗಳು ಪೌತಿ ಖಾತೆ ಪಡೆಯಲು ಮರಣ ದೃಢೀಕರಣ ಪತ್ರ, ವಂಶವೃಕ್ಷ, ಆರ್‌ಟಿಸಿ, ಆಧಾರ್ ಕಾರ್ಡ್ ಜತೆ ಅರ್ಜಿ ಕೊಡಬೇಕು. ಯಾವುದೇ ತಕರಾರು ಇಲ್ಲ ಎಂದರೆ 15 ದಿನದೊಳಗೆ ಫಲಾನುಭವಿಗಳಿಗೆ ಪೌತಿ ಖಾತೆ ಕೊಡಲಾಗುವುದು. ಅಂತೆಯೇ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದರೆ ಕೂಡಲೇ ಅರ್ಜಿ ಕೊಡಿ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಉಪ ತಹಸೀಲ್ದಾರ್ ಡಿ.ತಮ್ಮಣ್ಣಗೌಡ, ಗ್ರಾಪಂ ಅಧ್ಯಕ್ಷೆ ಅರ್ಪಿತಾ, ಸದಸ್ಯರಾದ ಟಿ.ಎಂ.ಸುರೇಶ್, ಟಿ.ಸಿ.ರಘು, ನಿಂಗಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗಣ್ಣ ಇತರರಿದ್ದರು.
ಇದೇ ವೇಳೆ ಪೌತಿ ಖಾತೆ ಸೇರಿದಂತೆ ಕಂದಾಯ ಇಲಾಖೆಗೆ ಸೇರಿದಂತೆ 45 ಜನರು ಅರ್ಜಿ ಸಲ್ಲಿಸಿದರು. ಅದರಂತೆ ಸಾಮಾಜಿಕ ಭದ್ರತಾ ಯೋಜನೆಯಿಂದ 2 ಅರ್ಜಿ ಸ್ವೀಕರಿಸಲಾಯಿತು. ಅಂತೆಯೇ 27 ಜನ ಫಲಾನುಭವಿಗಳಿಗೆ ಮಾಸಾಶನದ ಆದೇಶ ಪ್ರತಿ ವಿತರಿಸಲಾಯಿತು.