ಮೃತರ ಹೆಸರಲ್ಲಿನಲ್ಲಿಯೇ 10 ಸಾವಿರಕ್ಕೂ ಹೆಚ್ಚು ಆರ್‌ಟಿಸಿ: ಪೌತಿ ಖಾತೆ ಮಾಡಿಕೊಡಲು ಅನಗತ್ಯ ನಿರ್ಲಕ್ಷ್ಯ

1 (2)
Published on

ಮಂಡ್ಯ: ಜಿಲ್ಲೆಯಲ್ಲಿ ಪ್ರಸ್ತುತ 10 ಸಾವಿರಕ್ಕೂ ಹೆಚ್ಚು ಆರ್‌ಟಿಸಿ ಮೃತ ಖಾತೆದಾರರ ಹೆಸರಿನಲ್ಲಿಯೇ ಇವೆ. ಕಾರಣ ಪೌತಿ ಖಾತೆ ಮಾಡಿಕೊಡಲು ಅನಗತ್ಯ ವಿಳಂಬ ಮಾಡುತ್ತಿರುವುದು. ಈ ಹಿನ್ನೆಲೆಯಲ್ಲಿ ಅಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಬಿಸಿ ಮುಟ್ಟಿಸಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಯಂ ಪ್ರೇರಿತರಾಗಿ ‘ಪೌತಿ ಖಾತೆ ಆಂದೋಲನ’ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪೌತಿ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲದಿರುವ ಬಗ್ಗೆ ಸಾಕಷ್ಟು ದೂರು ಕೇಳಿಬಂದಿದೆ. ಇದರಿಂದಾಗಿ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಮಾತ್ರವಲ್ಲದೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಆಕ್ಷೇಪದ ಮಾತು ಬರುತ್ತಿರುವುದರಿಂದ ಡಿಸಿ ಸಮಸ್ಯೆ ಇತ್ಯರ್ಥ ಪಡಿಸಲು ಮುಂದಾಗಿದ್ದಾರೆ. ಅದರಂತೆ ಆಗಸ್ಟ್‌ನಿಂದ ಆಂದೋಲನ ನಡೆಸಿ ಖಾತೆ ಮಾಡಿಕೊಡಬೇಕು. ಇದರ ಬಗ್ಗೆ ಇತ್ಯರ್ಥಪಡಿಸಿದ ಪ್ರಕರಣದ ಮಾಹಿತಿಯ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಉಪತಹಸೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ತುರ್ತು ಅನಿವಾರ್ಯತೆ: ಪೌತಿ ಖಾತೆ ಮಾಡಿಕೊಡಲು ನಿರ್ಲಕ್ಷೃ ವಹಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಡಿಸಿ, ಜಿಲ್ಲೆಯಲ್ಲಿ ಪೌತಿ ಖಾತೆ ಪ್ರಗತಿಯಲ್ಲಿ ಹಿಂದುಳಿದಿದೆ. ಮಾತ್ರವಲ್ಲದೆ ತಹಸೀಲ್ದಾರ್, ಉಪತಹಸೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ವಿರುದ್ಧ ಮೌಖಿಕ ದೂರು ಬರುತ್ತಿವೆ.

ಜಮೀನಿನ ಮಾಲೀಕರು ಮರಣ ಹೊಂದಿದ ಬಳಿಕ ಖಾತೆ ಬದಲಾವಣೆಯಾಗದಿದ್ದರೆ ಅಂತಹ ಜಮೀನು ಸ್ವಾಧೀನದಲ್ಲಿದ್ದರೂ ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ. ಸಾಲ ಸೌಕರ್ಯವೂ ದೊರೆಯುವುದಿಲ್ಲ. ಪ್ರಕೃತಿ ವಿಕೋಪದಂತಹ ಅಚಾತುರ್ಯಗಳಿಂದಾಗಿ ಫಸಲು ನಾಶವಾದಾಗ ಸರ್ಕಾರದಿಂದ ನೀಡಲಾಗುವ ಪರಿಹಾರದ ಹಣ ಪಡೆಯುವುದು ದುಸ್ತರವಾಗುತ್ತದೆ. ಮಾತ್ರವಲ್ಲದೆ ಇಂತಹ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಂಡಾಗಲೂ ಪರಿಹಾರ ಪಡೆಯಲು ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ.

ಆದ್ದರಿಂದ ಸಂಬಂಧಿಸಿದವರಿಗೆ ಕಾನೂನುಬದ್ಧವಾಗಿ ಖಾತೆ ಮಾಡಿಕೊಡಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಕಂದಾಯ ಇಲಾಖೆ ಅಧಿಕಾರಿಗಳು ತುರ್ತು ಗಮನಹರಿಸಬೇಕು. ಮಾತ್ರವಲ್ಲದೆ ಕೆಲ ರೈತ ಕುಟುಂಬದ ವಾರಸುದಾರರು ಅನಕ್ಷರಸ್ಥರಾಗಿರುವುದರಿಂದ ಪೌತಿ ಖಾತೆ ಮಾಡಿಸಿಕೊಳ್ಳುವ ಸಂಬಂಧ ಅರ್ಜಿ ಹಾಕುವುದರ ಬಗ್ಗೆ ಮಾಹಿತಿ ಇರುವುದಿಲ್ಲ. ಇಂತಹ ಪ್ರಕರಣಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಡಿಸಿ ಸೂಚನೆ ನೀಡಿದ್ದಾರೆ.

ಫಲಾನುಭವಿಯಾಗದ ಶೇ.17ರಷ್ಟು ರೈತರು: ಪಿಎಂ ಕಿಸಾನ್ ಯೋಜನೆಯಡಿ ಜಿಲ್ಲೆಯಲ್ಲಿ ಶೇ.83ರಷ್ಟು ರೈತರು ಮಾತ್ರ ಫಲಾನುಭವಿಯಾಗಿದ್ದಾರೆ. ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯವರು ಇಕೆವೈಸಿ ಆಂದೋಲನ ಮಾಡುವ ಸಂದರ್ಭದಲ್ಲಿ ಸಂಗ್ರಹಿಸಿ ನೀಡಿದ ಮಾಹಿತಿಯಂತೆ ಶೇ.10 ರಿಂದ 15 ರಷ್ಟು ಖಾತೆದಾರರು ಪೌತಿಯಾಗಿದ್ದು, ಅವರು ವಾರಸುದಾರರ ಜಮೀನಿನ ಅನುಭವದಲ್ಲಿದ್ದಾರೆ. ಆದರೆ ಪೌತಿ ಖಾತೆಯಾಗದ ಕಾರಣ ಯೋಜನೆಯಡಿ ನೋಂದಣಿ ಮಾಡಲು ಸಾಧ್ಯವಾಗಿಲ್ಲ. ಇನ್ನೂ ಕೂಡ ಶೇ.17ರಷ್ಟು ರೈತರು ಪಿಎಂ ಕಿಸಾನ್ ಯೋಜನೆಯಡಿ ಫಲಾನುಭವಿಯಾಗದೆ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಪ್ರತಿ ಸಭೆ ಮತ್ತು ಸಮಾರಂಭಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜತೆಗೆ ಕಾನೂನು ಬದ್ಧ ವಾರಸುದಾರರಿಗೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರಂತೆ ಖಾತೆ ಬದಲಾವಣೆ ಮಾಡುವುದು ಅಧಿಕಾರಿಗಳ ಪ್ರಮುಖ ಕರ್ತವ್ಯವಾಗಿರುತ್ತದೆ. ಆದರೆ ಇಂತಹ ಕರ್ತವ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಣೆ ಮಾಡಿಲ್ಲ.

ಡಿಸಿ ನೀಡಿರುವ ಸೂಚನೆಗಳೇನು?: ಆಂದೋಲನಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್‌ಗಳು ಗ್ರಾಮವಾರು ಪೌತಿ ಖಾತೆದಾರರನ್ನು ಪತ್ತೆಹಚ್ಚಿ ಅರ್ಹ ಪ್ರಕರಣಗಳನ್ನು ಪಟ್ಟಿ ಮಾಡಬೇಕು. ಗ್ರಾಮ ಆಡಳಿತ ಅಧಿಕಾರಿಗಳು ಈಗಾಗಲೇ ಬೆಳೆ ಪರಿಹಾರ ತಂತ್ರಾಂಶದಲ್ಲಿ ಬೆಳೆ ಹಾನಿ ನಮೂದು ಮಾಡುವ ಸಂದರ್ಭದಲ್ಲಿ ಕಂಡು ಬಂದಂತಹ ಪೌತಿ ಖಾತೆದಾರರ ಮಾಹಿತಿಯನ್ನು ಭೂಮಿ ತಂತ್ರಾಂಶದಿಂದ ಪಡೆದು ಪಟ್ಟಿಗೆ ಸೇರಿಸಿಕೊಳ್ಳಬೇಕು. ವಾರದಲ್ಲಿ ಒಂದು ದಿನವನ್ನು ಪ್ರತ್ಯೇಕವಾಗಿ ಪೌತಿ ಖಾತೆ ಆಂದೋಲನಕ್ಕೆ ನಿಗದಿ ಪಡಿಸಿಕೊಳ್ಳಬೇಕು.

ಅರ್ಹ ಪ್ರಕರಣಗಳನ್ನು ಪತ್ತೆ ಹಚ್ಚಿದ ನಂತರ ನಿಗದಿಪಡಿಸಿದ ದಿನಾಂಕದಂದು ಕನಿಷ್ಟ 3 ಗ್ರಾಮ ಪಂಚಾಹಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೌತಿ ಖಾತಾ ಆಂದೋಲನಾ ಹಮ್ಮಿಕೊಳ್ಳಬೇಕು. ಆಂದೋಲನ ಕುರಿತು ಸಂಬಂಧಪಟ್ಟ ಗ್ರಾಮಸ್ಥರಿಗೆ ಗ್ರಾಮಸಹಾಯಕರು/ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಜಾಗೃತಿ ಮೂಡಿಸಬೇಕು. ಖಾತಾ ವಾರಸುದಾರರಿಂದ ನಮೂನೆ-19 ರಲ್ಲಿ ಅರ್ಜಿ ಸ್ವೀಕರಿಸಿ ನಾಡಕಚೇರಿಯ ಭೂಮಿ ತಂತ್ರಾಂಶದಲ್ಲಿ ಅರ್ಜಿಯನ್ನು ದಾಖಲಿಸಿ 16 ರಿಂದ 20 ದಿನಗಳಲ್ಲಿ ಖಾತೆ ಬದಲಾವಣೆಗೆ ಕ್ರಮ ವಹಿಸುವುದರ ಜತೆಗೆ ಶೇ.100ರಷ್ಟು ಪ್ರಗತಿ ಸಾಧಿಸಿ ಸಂಬಂಧಪಟ್ಟ ವಾರಸುದಾರರಿಗೆ ಆರ್‌ಟಿಸಿ ಮತ್ತು ಮ್ಯುಟೇಷನ್ ನೀಡಬೇಕು. ಉಪವಿಭಾಗಧಿಕಾರಿಗಳು ಪೌತಿಖಾತೆ ಆಂದೋಲನವನ್ನು ಮೇಲುಸ್ತುವಾರಿ ವಹಿಸುವುದರ ಜತೆಗೆ ಅನುಷ್ಠಾನಗೊಳಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net