ಪೌತಿ ಖಾತೆ ಆಂದೋಲನ ಸದುಪಯೋಗಪಡಿಸಿಕೊಳ್ಳಿ: ಶಾಸಕ ರವಿಕುಮಾರ್ ಗಣಿಗ ಸಲಹೆ

4
Published on

ಮಂಡ್ಯ: ರೈತರಿಗೆ ಅನುಕೂಲವಾಗಲೆಂದು ಪೌತಿ ಖಾತೆ ಆಂದೋಲನ ಆಯೋಜಿಸಲಾಗಿದೆ. ಆದ್ದರಿಂದ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ರವಿಕುಮಾರ್ ಗಣಿಗ ಸಲಹೆ ನೀಡಿದರು.

ತಾಲೂಕಿನ ಬಸರಾಳು ಗ್ರಾಮದಲ್ಲಿ ತಾಲೂಕು ಆಡಳಿತ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪೌತಿ ಖಾತೆ ಆಂದೋಲನದಲ್ಲಿ ಮಾತನಾಡಿದ ಅವರು, ಅಗತ್ಯ ದಾಖಲೆಗಳನ್ನು ಕೊಟ್ಟು ಉಚಿತವಾಗಿ ಖಾತೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಷ್ಟೋ ವರ್ಷಗಳಿಂದ ಮರಣ ಹೊಂದಿದವರ ಹೆಸರಿನಲ್ಲಿಯೇ ಆರ್‌ಟಿಸಿ ಬರುತ್ತಿದೆ. ಇದರಿಂದ ಸಾಲ ಸೌಲಭ್ಯ ಪಡೆಯಲು ರೈತರಿಗೆ ಆಗುತ್ತಿಲ್ಲ. ಹಾಗಾಗಿ ಅದನ್ನು ಪೌತಿ ಖಾತೆ ಮಾಡಿಸಿಕೊಳ್ಳಲು ಆರ್‌ಟಿಸಿ, ವಂಶವೃಕ್ಷ, ಮರಣ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ನೀಡಬಹುದು. ಒಂದು ವೇಳೆ ಮರಣ ಪ್ರಮಾಣ ಪತ್ರದ ಬಗ್ಗೆ ಗೊಂದಲವಿದ್ದರೆ ಗ್ರಾಮ ಲೆಕ್ಕಾಧಿಕಾರಿ, ರಾಜಸ್ವನಿರೀಕ್ಷಕರನ್ನು ಭೇಟಿ ಮಾಡಿ ಎಂದರು.

ತಹಸೀಲ್ದಾರ್ ನಾಗರಾಜ ಬಿರಾದಾರ್ ಮಾತನಾಡಿ, ಈ ಆಂದೋಲನ ಆಯಾ ಗ್ರಾಪಂಗಳಲ್ಲಿ ಪ್ರತಿ ಶುಕ್ರವಾರ ಹಾಗೂ ಹೋಬಳಿ ಮಟ್ಟದಲ್ಲಿಯೂ ನಡೆಯಲಿದೆ. ಆರ್‌ಟಿಸಿಯನ್ನು ಪೌತಿಖಾತೆ ಮಾಡುವಾಗ ಜಂಟಿಯಾಗಿ ವಾರಸುದಾರರಿಗೆ ಇಡುತ್ತೇವೆ. ಕುಟುಂಬದ ವಾರಸುದಾರರಲ್ಲಿ ಯಾರೋ ಒಬ್ಬರಿಗೆ ಮಾತನಾಡಿಕೊಂಡು ಉಳಿದವರಿಂದ ಒಪ್ಪಿಗೆ ಪತ್ರದ ಪ್ರಮಾಣ ಪತ್ರವನ್ನು ಪ್ರತಿಯೊಬ್ಬರು ಕೊಡಬೇಕು. ನಂತರ ಅವರು ಸೂಚಿಸಿದ ಕುಟುಂಬದ ವ್ಯಕ್ತಿಗೆ ಆರ್‌ಟಿಸಿ ನೀಡಲಾಗುವುದು. ಇಲ್ಲವಾದರೆ ಜಂಟಿಯಾಗಿ ಆರ್‌ಟಿಸಿ ಬರುತ್ತದೆ. ವಂಶವೃಕ್ಷವನ್ನು ಸಹ ಗ್ರಾಮ ಲೆಕ್ಕಾಧಿಕಾರಿ, ಆರ್‌ಐ ಕೊಡುತ್ತಾರೆ. ಅದನ್ನು ನಾವು ಪರಿಗಣಿಸುತ್ತೇವೆ ಎಂದರು.

ಉಪ ತಹಸೀಲ್ದಾರ್ ಗಣೇಶ್, ರಾಜಸ್ವ ನಿರೀಕ್ಷಕ ಮಂಜುನಾಥ್ ಇದ್ದರು. ಇದೇ ಸಂದರ್ಭದಲ್ಲಿ ಪೌತಿಖಾತೆಗಾಗಿ 93 ರೈತರು ಅರ್ಜಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net