ಬೆಂಗಳೂರಿನಲ್ಲೂ ಪೌರ ದಸರಾ: ಅಮೃತ್ ರಾಜ್

poura dasara
ಶಿವಮೊಗ್ಗದಲ್ಲಿ ಪೌರ ಕಾರ್ಮಿಕ ದಸರಾವನ್ನು ಎ.ಅಮೃತ್ ರಾಜ್ ಉದ್ಘಾಟಿಸಿದರು. ಎಸ್.ಎನ್.ಚನ್ನಬಸಪ್ಪ, ಡಾ.ಕವಿತಾ ಯೋಗಪ್ಪನವರ್, ವೇಣುಗೋಪಾಲ್, ಎನ್.ಗೋವಿಂದ, ಅನುಪಮಾ ಇದ್ದರು.
Published on

ಶಿವಮೊಗ್ಗ: ಪೌರ ಕಾರ್ಮಿಕ ದಸರಾ ಆಯೋಜನೆ ಮಾಡುವ ಮೂಲಕ ಶಿವಮೊಗ್ಗ ರಾಜ್ಯದಲ್ಲೇ ವಿಭಿನ್ನ ಕೆಲಸ ಮಾಡಿದೆ. ಮುಂದಿನ ವರ್ಷದಿಂದ ಬೆಂಗಳೂರಿನಲ್ಲೂ ಪೌರ ಕಾರ್ಮಿಕ ದಸರಾ ಆಯೋಜನೆ ಮಾಡುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ನಗರ ಪಾಲಿಕೆಗಳ ನೌಕರರ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ತಿಳಿಸಿದರು.

ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಪೌರ ಕಾರ್ಮಿಕ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಇತ್ತೀಚೆಗೆ ಸಂಭ್ರಮದಿಂದ ಪೌರ ಕಾರ್ಮಿಕರ ದಿನಾಚರಣೆ ಮಾಡಲಾಗಿತ್ತು. ಇದೀಗ ಅವರ ಹೆಸರಿನಲ್ಲಿ ದಸರಾ ಆಚರಣೆ ಮಾಡಿ ವಿವಿಧ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ ಎಂದರು.
ಪೌರ ಕಾರ್ಮಿಕರು ವರ್ಷವಿಡೀ ನಗರದ ನೈರ್ಮಲ್ಯಕ್ಕಾಗಿ ಕೆಲಸ ಮಾಡುತ್ತಾರೆ. ಅವರು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಂದರ್ಭವೇ ಹೆಚ್ಚು. ಹೀಗಾಗಿ ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗುವಂತಾಗಬೇಕು. ಈ ದಿಸೆಯಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಯಾವುದೇ ಹಬ್ಬ, ಕಾರ್ಯಕ್ರಮಗಳಿದ್ದರೂ ಯಶಸ್ವಿಯಾಗಲು ಪೌರ ಕಾರ್ಮಿಕರು ಅವಶ್ಯ. ಪೌರ ಕಾರ್ಮಿಕರು ಒಂದರ್ಥದಲ್ಲಿ ಜನರ ಆರೋಗ್ಯ ಕಾಪಾಡುವ ವೈದ್ಯರು. ಶಿವಮೊಗ್ಗದಲ್ಲಿ ಈ ಹಿಂದೆ ಅತಿವೃಷ್ಟಿ ಸಂಭವಿಸಿದಾಗ ಪಾಲಿಕೆಯಲ್ಲಿ ಮೀಸಲಿರಿಸಿದ್ದ ಹಣವನ್ನು ನೆರೆ ಸಂತ್ರಸ್ತರಿಗಾಗಿ ನೀಡಿದವರು ಪೌರ ಕಾರ್ಮಿಕರು ಎಂದು ಬಣ್ಣಿಸಿದರು.
ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ, ಪಾಲಿಕೆ ಎಇಇ ಅಮೋಘ ಎಸ್. ಕವಲಗಿ, ಹಿರಿಯ ಆರೋಗ್ಯ ನಿರೀಕ್ಷಕ ವೇಣುಗೋಪಾಲ್, ಉಪ ಆಯುಕ್ತ ಆರ್.ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net