

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಜೀವನದ ಎಲ್ಲ ಸಮಸ್ಯೆಗಳನ್ನು ನಗು ಮುಖದಿಂದ ಗೆದ್ದ ಓರ್ವ ಸೃಜನಶೀಲ ಬರಹಗಾರ. ಅವರು ವೃತ್ತಿಯಿಂದ ನಿವೃತ್ತರಾದರೂ ಬರವಣಿಗೆಗಳಿಗೆ ಇಂದಿಗೂ ವಿಶ್ರಾಂತಿ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ, ಸಾಹಿತಿ ಡಾ. ಚನ್ನಪ್ಪ ಅಂಗಡಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ಧರೆಗೆ ದೊಡ್ಡವರು ಕಾರ್ಯಕ್ರಮದಲ್ಲಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಬದುಕು ಕುರಿತು ಮಾತನಾಡಿದರು.
ಸಿದ್ದಲಿಂಗ ಪಟ್ಟಣಶೆಟ್ಟಿ ಮಾತೃ ಹೃದಯಿಗಳು. ನಗು ಮೊಗವೇ ಅವರ ಸಾಹಿತ್ಯದ ಜೀವಾಳ. ಅವರು ಬರೆದ ಗಿರಿಜೆವ್ವನ ಮಗ ಕೃತಿಯಲ್ಲಿ ಜೀವನದ ಸಮಗ್ರ ವ್ಯಕ್ತಿತ್ವದ ಚಿತ್ರಣವೇ ಇದೆ. ಪಟ್ಟಣಶೆಟ್ಟಿ ಅವರ ಸ್ಮರಣ ಶಕ್ತಿ ಅದ್ಭುತವಾದದ್ದು ಎಂದರು.
ದೇವು ಪತ್ತಾರ ಮಾತನಾಡಿ, ಪಟ್ಟಣಶೆಟ್ಟಿ ಅವರ ಕೃತಿಗಳನ್ನು ಓದುವುದು ಮತ್ತು ಆಲಿಸುವುದೇ ಒಂದು ಸೌಭಾಗ್ಯ. ಭಾವ ಜೀವಿಗಳಾದ ಅವರ ಕೃತಿಗಳಲ್ಲಿ ವೈಚಾರಿಕ ಚಿಂತನೆಗಳಿವೆ. ಹಿಂದಿ ಭಾಷೆ ಕಲಿತು ಪ್ರಾಧ್ಯಾಪಕರಾದರೂ ಕನ್ನಡ ಹಾಗೂ ಇಂಗ್ಲೀಷ ಭಾಷೆಯಲ್ಲಿ ಅವರಿಗಿದ್ದ ಪ್ರಬುದ್ಧತೆ ದೊಡ್ಡದು. ಅವರ ಸಾಹಿತ್ಯದ ಮೂಲ ಸೆಲೆಯೇ ಪ್ರೀತಿ. ಅವರ ಸಾಹಿತ್ಯವನ್ನು ಓದದ ಕನ್ನಡಿಗರೇ ಇಲ್ಲ ಎಂದರು.
ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಹಿತ್ಯದ ಮಾತುಗಳನ್ನು ಆಲಿಸಲು ಬಂದ ವಿದ್ಯಾರ್ಥಿಗಳು ನಿಜವಾಗಿ ಧರೆಗೆ ದೊಡ್ಡವರು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೊಡ್ಡವರಾಗುವ ದೊಡ್ಡ ಗುಣ ಬೆಳೆಸಿಕೊಳ್ಳಬೇಕು. ಪ್ರಶ್ನೆ ಕೇಳುವ ಮನೋಭಾವ ಬೆಳೆಯಬೇಕು. ಇದು ತಾಕಿರ್ಕ ಶಕ್ತಿ, ಜ್ಞಾನದ ತಿಜ ವಿಸ್ತರಿಸುತ್ತದೆ ಎಂದರು.
ಬಸವಪ್ರಭು ಹೊಸಕೇರಿ, ಡಾ. ಶೈಲಜಾ ಅಮರಶೆಟ್ಟಿ, ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ, ನಿಂಗಣ್ಣ ಕುಂಟಿ, ಹೇಮಾ ಪಟ್ಟಣಶೆಟ್ಟಿ, ಎಂ.ಎಂ. ಚಿಕ್ಕಮಠ, ರಾಮಚಂದ್ರ ಧೋಂಗಡೆ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ವಂದಿಸಿದರು.