

ಸ್ಥಳೀಯಾಡಳಿತಕ್ಕೆ ಚುನಾವಣೆ ನಡೆದು ಎರಡು ವರ್ಷ ಸಂದರೂ, ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅಧಿಕಾರಕ್ಕೇರುವ ಯೋಗ ಲಭಿಸಿಲ್ಲ. ಇದರ ಕಡೆಗೆ ಗಮನ ಹರಿಸರದ ಸರ್ಕಾರ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಲು ಮುಂದಾಗಿದೆ. ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿ ಕೈಯಲ್ಲಿ ಆಡಳಿತ ಎರಡು ವರ್ಷಗಳಿಂದ ನಡೆಯುತ್ತಿದ್ದು, ಜನಸಾಮಾನ್ಯರು ತಮ್ಮ ಕಷ್ಟಗಳನ್ನು ಯಾರಲ್ಲಿ ಹೇಳಬೇಕೆಂಬ ಗೊಂದಲದಲ್ಲಿದ್ದಾರೆ.
ರಾಜ್ಯದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕಾಗಿ ಹೊರಡಿಸಿದ ಮೀಸಲಾತಿಯಲ್ಲಿ ಗೊಂದಲ ಏರ್ಪಟ್ಟು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಚುನಾವಣೆ ನಡೆದರೂ ಪ್ರಯೋಜನವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರ ಮೀಸಲಾತಿ ವಿಚಾರದಲ್ಲಿ ಇರುವ ಗೊಂದಲವನ್ನು ನ್ಯಾಯಾಲಯಕ್ಕೆ ಸರಿಯಾಗಿ ಮನದಟ್ಟು ಮಾಡುವಲ್ಲಿ ಸಂಪೂರ್ಣ ವಿಫಲವಾದ ಕಾರಣ ಪಟ್ಟಣ ಪಂಚಾಯಿತಿ ತ್ರಿಶಂಕು ಸ್ಥಿತಿ ತಲುಪಿದೆ.
ವಿಟ್ಲ ಪಟ್ಟಣ ಪಂಚಾಯಿತಿಗೆ ೨೦೨೧ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿತ್ತು. ಒಟ್ಟು ೧೮ ಸ್ಥಾನಗಳ ಪೈಕಿ ೧೨ ಸ್ಥಾನಗಳನ್ನು ಬಿಜೆಪಿ ಪಡೆದು, ೫ ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಗಳಿಸಿ, ಒಂದು ಸ್ಥಾನವನ್ನು ಎಸ್‌ಡಿಪಿಐಗೆ ಬಿಟ್ಟುಕೊಟ್ಟಿತ್ತು. ಆದರೆ ಈವರೆಗೆ ಜನಪ್ರತಿನಿಽಗಳಿಗೆ ಅಽಕಾರಕ್ಕೇರುವ ಅವಕಾಶ ಸಿಗದೆ ಅಽಕಾರಿಗಳೇ ತಮಗೆ ಬೇಕಾದ ಕೆಲಸವನ್ನು ಕಚೇರಿಯಲ್ಲಿ ಕುಳಿತು ಮಾಡುವ ಕಾರ್ಯವಾಗುತ್ತಿದೆ. ಇದರಿಂದ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗದೆ ನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅಭಿವೃದ್ಧಿ ಮುಂದಾಲೋಚನೆ ಇಲ್ಲ!
ವಿಟ್ಲ ಹಿಂದಿನಿಂದಲೂ ಜನಪ್ರತಿನಿಽಗಳಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಾ ಬಂದಿದ್ದು, ಈಗಲೂ ಅದು ಮುಂದುವರಿಯುತ್ತಿದೆ. ರಸ್ತೆ ವಿಸ್ತರಣೆಯಾಗದೆ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಇಲ್ಲದೆ ರಸ್ತೆಗಳೇ ಪಾರ್ಕಿಂಗ್ ಸ್ಥಳವಾಗಿದೆ. ಆಡಳಿತ ವ್ಯವಸ್ಥೆಗೆ ಬೇಕಾದ ಅಗತ್ಯ ಕಟ್ಟಡಗಳ ನಿರ್ಮಾಣವಾಗಿಲ್ಲ. ಕೃಷಿಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬೇಕಾದ ಸ್ಥಳಾವಕಾಶವಿಲ್ಲ. ವಾರದ ಸಂತೆ ಮಾರುಕಟ್ಟೆಗೆ ಜಾಗವಿಲ್ಲ. ಅಭಿವೃದ್ಧಿ ಮುಂದಾಲೋಚನೆ ಇಲ್ಲದೆ ಕೆಲವು ದೊಣ್ಣೆ ನಾಯಕರ ಆಟಕ್ಕೆ ವಿಟ್ಲ ಬಲಿಯಾಗುತ್ತಿದೆ.
ಭೂಸ್ವಾಧಿನ ಯಾಕೆ?
ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ನಾಲ್ಕು ಕಟ್ಟಡಗಳ ಜಾಗವನ್ನು ಸರ್ಕಾರ ಸ್ವಾಽನಪಡಿಸಿಕೊಂಡಿತ್ತು. ಕಟ್ಟಡಗಳನ್ನು ಕೆಡವಿ ಆ ಸ್ಥಳಕ್ಕೆ ಇಂಟರ್‌ಲಾಕ್ ಅಳವಡಿಸಲಾಗಿದೆಯಾದರೂ ಮೂಲಉದ್ದೇಶ ಮರೆತು ವಾಹನ ನಿಲುಗಡೆಗೆ ಅಕಾರಿಗಳು ಅವಕಾಶ ಮಾಡಿಕೊಡುತ್ತಿದ್ದಾರೆ. ಇದರಿಂದ ಭೂಸ್ವಾಧಿನ ಮಾಡಿದ್ದು ಏಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಸಿಬ್ಬಂದಿ ಕೊರತೆ
ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ೪೦ ಹುದ್ದೆಗಳಿದ್ದು, ಇದರಲ್ಲಿ ೨೧ ಖಾಲಿಯಾಗಿವೆ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಮುಖ್ಯಾಧಿಕಾರಿ ಹುದ್ದೆ ಒಂದು ಸರಿಯಾಗಿ ನೇಮಕವಾಗುತ್ತಿದೆ. ಉಳಿದ ಕಂದಾಯ ನಿರೀಕ್ಷಕ, ಕಿರಿಯ ಅಭಿಯಂತ, ಕಿರಿಯ ಆರೋಗ್ಯ ನಿರೀಕ್ಷಕ, ಸಮುದಾಯ ಸಂಘಟನಾಧಿಕಾರಿ, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಸ್ಥಿರತೆ ಇಲ್ಲದಂತಾಗಿದೆ. ನೇಮಕಾತಿ ಆದರೂ ವಿಟ್ಲಕ್ಕೆ ಬರದೇ ಹೋದವರೇ ಹೆಚ್ಚು. ಕೆಲವು ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಿಸಲಾಗಿದೆ.
ನಾಮನಿರ್ದೇಶಿತ ಸದಸ್ಯರು
ವಿಟ್ಲ ಪಟ್ಟಣ ಪಂಚಾಯಿತಿಯ ನೂತನ ನಾಮನಿರ್ದೇಶಕ ಸದಸ್ಯರಾಗಿ ಮೊಹಮ್ಮದ್ ಇಕ್ಬಾಲ್, ಶ್ರೀನಿವಾಸ್ ಶೆಟ್ಟಿ ಕೊಲ್ಯ, ಸುನೀತಾ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಬ್ಲಾಕ್ ಮಾಜಿ ಅಧ್ಯಕ್ಷರಾದ ಪ್ರವೀಣ್‌ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮೊಹಮ್ಮದ್, ವಿಟ್ಲ ನಗರ ಕಾಂಗ್ರೆಸ್ ವಕ್ತಾರ ವಿ.ಕೆ.ಎಂ.ಅಶ್ರಫ್ ಶಿಫಾರಸ್ಸಿನಂತೆ ಶಾಸಕ ಅಶೋಕ್ ಕುಮಾರ್ ರೈ ನೇಮಿಸಿ ಆದೇಶಿಸಿದ್ದಾರೆ.
ಪಟ್ಟಣ ಪಂಚಾಯಿತಿ ಮೀಸಲಾತಿ ಬಗ್ಗೆ ಇರುವ ಸಮಸ್ಯೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ, ಸಂಬಂಧಪಟ್ಟ ಸಚಿವರಲ್ಲಿ ಹಾಗೂ ಅಧಿಕಾರಿಗಳಲ್ಲಿ ಮಾತುಕತೆ ಮಾಡಲಾಗಿದೆ. ಹಿಂದಿನ ವ್ಯವಸ್ಥೆ ಏನೂ ಮಾಡದ ಕಾರಣ ಸಮಸ್ಯೆ ಹಾಗೇ ಉಳಿದಿದ್ದು, ಸರ್ಕಾರದ ಕಡೆಯಿಂದ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಸಮಸ್ಯೆ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
| ಅಶೋಕ್ ಕುಮಾರ್ ರೈ, ಶಾಸಕ