

ಮಂಡ್ಯ: ತಾಲೂಕಿನ ಬಸರಾಳು ಗ್ರಾಮದಲ್ಲಿ ಆದಿಶಕ್ತಿ ಹೊಂಗೆತಾಳು ಪಟ್ಟಲಮ್ಮದನ ಹಬ್ಬ ಹಾಗೂ ಕೊಂಡೋತ್ಸವ ಸಂಭ್ರಮ, ಸಡಗರದಿಂದ ಅದ್ಧೂರಿಯಾಗಿ ನಡೆಯಿತು.
ಗ್ರಾಮದ ಹೊರವಲಯದ ಗದ್ದೆ ಬಯಲಿನಲ್ಲಿ ನೆಲೆಗೊಂಡಿರುವ ಅಧಿದೇವತೆ ಪಟ್ಟಲದಮ್ಮನ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಹೋಮ, ಹವನ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಅಷ್ಟೋತ್ತರ ನೆರವೇರಿತು. ಅಂತೆಯೇ ದೇವಿಗೆ ವಿಶೇಷ ಬಗೆಯ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಹಬ್ಬದ ಅಂಗವಾಗಿ ಬಸ್ ನಿಲ್ದಾಣದಿಂದ ಎರಡು ಕಿ.ಮೀ ದೂರದ ದೇವಸ್ಥಾನದವರೆಗೆ ವಿದ್ಯುತ್ ದ್ವೀಪಗಳ ಅಲಂಕಾರ, ತಳಿರು ತೋರಣ ಕಟ್ಟಲಾಗಿತ್ತು. ರಸ್ತೆಯುದ್ದಕ್ಕೂ ರಂಗೋಲಿಗಳನ್ನು ಹಾಕಲಾಗಿತ್ತು. ಮಧ್ಯರಾತ್ರಿ 12 ಗಂಟೆಗೆ ಗ್ರಾಮದ ಮಧ್ಯಭಾಗದಲ್ಲಿರುವ ಮಠದ ಮನೆಯಿಂದ ದೇವಿಯ ಉತ್ಸವ ಮೂರ್ತಿಯನ್ನು ಛತ್ರಿ ಚಾಮರ ತಮಟೆ ಮಂಗಳವಾದ್ಯ ಸಮೇತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಗ್ರಾಮದ ಮುತ್ತೈದೆಯರು ತಂಬಿಟ್ಟು ಹಾಗೂ ಮಡೆ ಆರತಿಯನ್ನು ದೇವಿಗೆ ಅರ್ಪಿಸಿ ಉತ್ಸವ ಮೂರ್ತಿಯೊಂದಿಗೆ ಹೆಜ್ಜೆ ಹಾಕಿದರು. ಉತ್ಸವಮೂರ್ತಿ ದೇವಿಯ ದೇವಸ್ಥಾನಕ್ಕೆ ಆಗಮಿಸುವ ಮುನ್ನ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಗುಂಡಾಪುರದ ಗ್ರಾಮಸ್ಥರು ಸಂಪ್ರದಾಯದಂತೆ ಗುಡ್ಡದ ಮೇಲಿನಿಂದ ದೇವಿಗೆ ಕೊಂಬು ಕಹಳೆಯೊಂದಿಗೆ ದೇವಿಗೆ ಮಡೆ ಹಾಗೂ ತಂಬಿಟ್ಟಿನಾರತಿಯನ್ನು ಸಲ್ಲಿಸಿದರು. ನಂತರ ದೇವಿಯ ಉತ್ಸವ ಮೂರ್ತಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಆಗಮಿಸಿತು. ಅಂತೆಯೇ ಉತ್ಸವ ಮೂರ್ತಿ ಹೊತ್ತ ಗುಡ್ಡಪ್ಪ ಸೇರಿದಂತೆ ಮೂವರು ಗುಡ್ಡಪ್ಪಗಳು ಕೊಂಡವನ್ನು ಹಾಯ್ದರು. ಮಧ್ಯಾಹ್ನದ ನಂತರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಯಿತು. ಬಸರಾಳು ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದರು.