

ಮದ್ದೂರು: ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ಮೂರು ದಿನದ ಶಕ್ತಿದೇವತೆ ಪಟ್ಟಲದಮ್ಮ ಹಾಗೂ ತೊರೆಹಳ್ಳದಮ್ಮ ಹಬ್ಬಕ್ಕೆ ಭಾನುವಾರ ಸಂಭ್ರಮದ ತೆರೆ ಕಂಡಿತು.
ಮೊದಲ ದಿನ ಸಪ್ತಮಿ ಜೇಷ್ಟ ನಕ್ಷತ್ರದಲ್ಲಿ ಗ್ರಾಮದೇವತೆ ಪಟ್ಟಲದಮ್ಮ ಹಾಗೂ ತೊರೆಹಳ್ಳದಮ್ಮ ದೇವಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ಬಾಯಿಬೀಗ, ಆರತಿಯೊಂದಿಗೆ ದೇವರ ಮೆರವಣಿಗೆ ನಡೆಯಿತು. ಶನಿವಾರ ಮುಂಜಾನೆ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಂಜೆ ಪೂಜಾ ಕುಣಿತ, ಆರತಿ, ಪಲ್ಲಕ್ಕಿ, ವೀರಗಾಸೆ, ಕೀಲು ಕುದುರೆ, ಗೊಂಬೆಗಳ ನೃತ್ಯ ಮತ್ತು ಜಾತ್ರಾ ಮಹೋತ್ಸವ ನಡೆಯಿತು. ಆದರೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಜೋರು ಮಳೆಯಿಂದಾಗಿ ಉತ್ಸವ ಹಾಗೂ ಜಾತ್ರೆ ಅಸ್ತವ್ಯಸ್ತಗೊಳ್ಳುವಂತಾಯಿತು. ಭಾನುವಾರ ಪಟ್ಟಲದಮ್ಮ ದೇವಿಗೆ ಬೆಳ್ಳಿ ಅಲಂಕಾರ ಮತ್ತು ವಿಶೇಷ ಪೂಜೆ ನೆರವೇರಿಸಲಾಯಿತು. ಹಬ್ಬದ ಅಂಗವಾಗಿ ಗ್ರಾಮದ ಪ್ರಮುಖ ರಸ್ತೆ, ಎಲ್ಲ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಏ.6ರಂದು ಬೋರೇದೇವರ ಕೊಂಡೋತ್ಸವ ಮತ್ತು ಹಬ್ಬ ನಡೆಯಲಿದೆ.