ಪಟ್ಟಡ ಪ್ರಭಾಕರ ನಿಧನ

24MDK01 PRABHAKARA
Published on

ಮಡಿಕೇರಿ:

ಅರೆಭಾಷೆಯ ಹಿರಿಯ ಸಾಹಿತಿ ಪಟ್ಟಡ ಪ್ರಭಾಕರ (೭೫) ಬುಧವಾರ (ಮೇ ೨೪) ನಿಧನರಾದರು. ೨ ದಶಕದ ಹಿಂದೆಯೇ ’ಕೊಡಗು ಸಂಗಾತಿ’ ಹೆಸರಿನ ಅರೆಭಾಷೆಯ ಪಾಕ್ಷಿಕ ಆರಂಭಿಸಿದ್ದ ಇವರು ಅರೆಭಾಷೆಯಲ್ಲಿ ಸಾಕಷ್ಟು ಸಂಖ್ಯೆಯ ಬರಹಗಾರರನ್ನು ಹುಟ್ಟುಹಾಕಿದ್ದರು. ಅರೆಭಾಷೆಯ ಓದುಗ ಬಳಗವನ್ನೂ ಸೃಷ್ಟಿಸಿದ್ದರು. ಅರೆಭಾಷೆ ಗೌಡ ಜನಾಂಗದ ಕನ್ನಡ ಬರಹಗಾರರಿಗೂ ತಮ್ಮ ಪತ್ರಿಕೆಯಲ್ಲಿ ಅವಕಾಶ ನೀಡುವ ಮೂಲಕ ಮುಂಚೂಣಿ ಲೇಖಕರನ್ನು ಬೆಳಕಿಗೆ ತಂದಿದ್ದರು. ’ನನ್ನ ಕನಸಿನ ಮಡಿಕೇರಿ’ ಎನ್ನುವ ಪುಸ್ತಕವನ್ನೂ ಬರೆದಿದ್ದ ಇವರು ಭವಿಷ್ಯದ ಮಡಿಕೇರಿ ಬಗ್ಗೆ ತಮ್ಮದೇ ಆದ ಕನಸಗಳನ್ನು ಹಂಚಿಕೊಂಡಿದ್ದರು.

ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಅಂದಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ವಿವಿಧ ಶಾಖೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಬ್ಯಾಂಕ್‌ನಿಂದ ನಿವೃತ್ತರಾದ ನಂತರ ಸ್ವಗ್ರಾಮ ಮಡಿಕೇರಿ ತಾಲೂಕಿನ ಅವಂದೂರಿನಲ್ಲಿ ನೆಲೆಸಿ ತಮ್ಮ ಸಾಹಿತ್ಯಿಕ ಸೇವೆ ಮುಂದುವರಿಸಿದ್ದರು. ಸಮಾಜಮುಖಿ ಕೆಲಸಗಳಲ್ಲಿ ಸದಾ ಮುಂದಿರುತ್ತಿದ್ದರು.

ಅವಂದೂರು ಧವಸ ಭಂಡಾರದ ಮತ್ತು ಬೆಟಗೇರಿ ಸರ್ಕಾರಿ ಪ್ರಾಥಮಿಕ ಶಾಲೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ಶಾಲಾ ಅಭಿವೃದ್ಧಿ ಮಂಡಳಿ ವತಿಯಿಂದಲೇ ಈ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲು ಕಾರಣಕರ್ತರಾಗಿದ್ದರು. ಆಂಗ್ಲಮಾಧ್ಯಮ ತರಗತಿಗಳನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಫಲ ಸಿಕ್ಕಿರಲಿಲ್ಲ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆ ಸಂಬಂಧ ಪ್ರಯತ್ನಪಟ್ಟವರಲ್ಲಿ ಪಟ್ಟಡ ಪ್ರಭಾಕರ ಕೂಡ ಸೇರಿದ್ದಾರೆ.

ದಿ. ಪಟ್ಟಡ ಮುತ್ತಣ್ಣ ಅವರ ಪುತ್ರ ಪಟ್ಟಡ ಪ್ರಭಾಕರ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ೧೨ ಗಂಟೆ ಒಳಗೆ ಸ್ವಗ್ರಾಮ ಅವಂದೂರಿನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net