

ಮೈಸೂರು: ಗ್ರಾಮೀಣ ಭಾಗದಲ್ಲಿಯೂ ಪೌರಾಣಿಕ ನಾಟಕಗಳಿಗೆ ಪ್ರೋತ್ಸಾಹ ಕಡಿಮೆ ಅಗುತ್ತಿದೆ ಎಂದು ರಾಜೇಶ್ವರಿ ವಸ್ತ್ರಾಲಂಕಾರದ ಮಾಲೀಕರಾದ ಬಿ.ಎಂ.ರಾಮಚಂದ್ರ ಬೇಸರ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಕನ್ನಡ ವೃತ್ತಿ ರಂಗಭೂಮಿ ಕಲಾವಿದೆಯರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಪುರಭವನದಲ್ಲಿ ಸೋಮವಾರ ಆಯೋಜಿಸಿದ್ದ 36ನೇ ವರ್ಷದ ಪೌರಾಣಿಕ ರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹಿಂದೆ ಪೌರಾಣಿಕ ನಾಟಕಗಳು ಬಹಳ ವೈಭವದಿಂದ ನಡೆಯುತ್ತಿದ್ದವು.ಇದರಿಂದ ನಮ್ಮ ಕಲೆ, ಸಂಸ್ಕೃತಿ, ಪುರಾಣಗಳನ್ನು ಜನರಿಗೆ ನಾಟಕಗಳ ಮೂಲಕ ತಲುಪಿಸಲು ಸಹಕಾರಿ ಅಗಿತ್ತು. ಆದರೆ ಇತ್ತೀಚೆಗೆ ನಾಟಕಗಳು ಕ್ಷೀಣಿಸುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಕಾಡೆಮಿಗಳು ಸಹಾ ಪೌರಾಣಿಕ ನಾಟಕಗಳು ಎಂದರೆ ಮೂಗು ಮುರಿಯುತ್ತಿವೆ. ಸರಿಯಾದ ಅನುದಾನ ನೀಡಲು ಹಿಂಜರಿಯುತ್ತಿದ್ದಾರೆ. ಇದರಿಂದ ಗ್ರಾಮೀಣ ಕಲೆಯಾದ ಪೌರಾಣಿಕ ನಾಟಕಗಳು ಕಡಿಮೆ ಅಗುತ್ತಿವೆ. ಹಾಗಾಗಿ ಇಲಾಖೆ, ಅಕಾಡೆಮಿಗಳು ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಬೇಕು ಎಂದು ಕೋರಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಾ.ಪು.ಸಿದ್ದವೀರಪ್ಪ, ರಂಗಕಲಾವಿದೆ ಕೆ.ಎಂ.ಗಿರಿಜಮ್ಮ, ಚಲನಚಿತ್ರ ನಿರ್ಮಾಪಕ ಶ್ರೀನಿವಾಸ್, ಕಲಾವಿದ ಮರೀಗೌಡ, ಸಂಘದ ಅಧ್ಯಕ್ಷೆ ಎಸ್.ವಸಂತಕೃಷ್ಣ, ಕಾರ್ಯದರ್ಶಿ ಎನ್.ಲೀಲಾವತಿ ಇತರರು ಇದ್ದರು.
ರಂಗಚಾವಡಿಯಿಂದ ರಾಮಾಯಣ, ಕುರುಕ್ಷೇತ್ರ ದೃಶ್ಯಾವಳಿ, ಭುವನೇಶ್ವರಿ ಕಲಾಸಂಘದಿಂದ ಸಾಮ್ರಾಟ್ ಅಶೋಕ ಐತಿಹಾಸಿಕ ನಾಟಕ, ದಿವ್ಯಶ್ರೀ ಕಲಾ ಸಂಘದಿಂದ ಆಧಿಮೂರ್ತಿ ಪಟ್ಟಾಭಿಷೇಕ, ಮುದುಕನ ಮದುವೆ ನಾಟಕ ಪ್ರದರ್ಶನಗೊಂಡಿತು.