ಮೀಸಲಾತಿ ತೀರ್ಮಾನ ಹಿಂಪಡೆಯುವಂತೆ ಆಗ್ರಹಿಸಿ ರಾಷ್ಟ್ರಭಕ್ತರ ಪ್ರತಿಭಟನೆ

rastrabhaktara balaga protest
Published on

ಶಿವಮೊಗ್ಗ: ವಸತಿ ಯೋಜನೆಯಡಿ ನಿರ್ಮಾಣ ಆಗುವ ಮನೆಗಳಲ್ಲಿ ಮುಸ್ಲಿಮರಿಗೆ ಶೇ.15ರಷ್ಟು ಮೀಸಲಾತಿ ನೀಡುವ ಸಚಿವ ಸಂಪುಟದ ತೀರ್ಮಾನವನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಬುಧವಾರ ನಗರದ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಶಿವಪ್ಪನಾಯಕ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಓಲೈಸಿಕೊಂಡು ತುಷ್ಟಿಕರಣ ಮಾಡುತ್ತಿದೆ. ಇದೀಗ ವಸತಿ ಜಿಹಾದ್‌ಗೆ ಮುಂದಾಗಿದೆ ಎಂದು ಕಿಡಿಕಾರಿದರು. ನಂತರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಪಂ ಮಾಜಿ ಸದಸ್ಯ, ರಾಷ್ಟ್ರಭಕ್ತ ಬಳಗದ ಸಹ ಸಂಚಾಲಕ ಕೆ.ಇ.ಕಾಂತೇಶ್ ಮಾತನಾಡಿ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಮಾತು ಮರೆತಿರುವ ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ವಿಶೇಷ ಸವಲತ್ತುಗಳನ್ನು ಕೊಡಲು ಮುಂದಾಗಿದ್ದಾರೆ. ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಆದರೂ ಮತ್ತೆ ಬಡವರಿಗೆ ಮೀಸಲಿರುವ ಮನೆಗಳನ್ನು ಕಿತ್ತು ಅಲ್ಪಸಂಖ್ಯಾತರಿಗೆ ನೀಡಲು ಹೊರಟಿದ್ದಾರೆ ಎಂದು ಖಂಡಿಸಿದರು.

ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ, ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಪ್ರಮುಖರಾದ ರಮೇಶ್ ಬಾಬು ಜಾಧವ್, ಎಸ್.ಕೆ.ಶೇಷಾಚಲ, ಇ.ವಿಶ್ವಾಸ್, ಮಹಾಲಿಂಗ ಶಾಸ್ತ್ರಿ, ಸುವರ್ಣಾ ಶಂಕರ್, ಮೋಹನ್ ಜಾಧವ್, ಲಕ್ಷ್ಮೀ ಶಂಕರ ನಾಯ್ಕ, ಆಶಾ ಚನ್ನಬಸಪ್ಪ, ಸೀತಾಲಕ್ಷ್ಮೀ, ಶಂಕರನಾಯ್ಕ, ಅರುಣಾಚಲಂ, ರಾಜಾರಾಮ್ ಭಟ್, ಶಿವಾಜಿ, ಚನ್ನಬಸಪ್ಪ, ಕುಬೇರಪ್ಪ, ಗೋವಿಂದಪ್ಪ, ಎಸ್.ಜಿ.ಬಾಲು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net