ಯುವ ಜನತೆಯಲ್ಲಿ ರಾಷ್ಟ್ರಪ್ರೇಮ ಕಡಿಮೆಯಾಗುತ್ತಿದೆ

Patriotism is waning among the youth
Published on

ಕುಶಾಲನಗರ:

ಇಂದಿನ ಯುವಶಕ್ತಿಯಲ್ಲಿ ದೇಶಭಕ್ತಿ ಕಡಿಮೆ ಆಗುತ್ತಿದ್ದು ಸರಿಯಾದ ಮಾರ್ಗದರ್ಶನದ ಕೊರತೆ ಕಾಡುತ್ತಿದೆ ಎಂದು ಮಾಜಿ ಸೈನಿಕ ಅಮೆ ಜನಾರ್ದನ ಅಭಿಪ್ರಾಯಪಟ್ಟರು. ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿಶಾಲೆ ಸಹಯೋಗದಲ್ಲಿ ಸಮೀಪದ  ಕೂಡಿಗೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವಕ, ಯುವತಿಯರಿಗೆ ಸೇನೆಯಲ್ಲಿ ಉತ್ತಮ ಅವಕಾಶ ಇದೆ. ಇದನ್ನು ಬಳಸಿಕೊಳ್ಳಬೇಕು. ಸೈನಿಕನಾಗುವವನಿಗೆ ದೈಹಿಕ ಅರ್ಹತೆಗಳ ಜತೆಗೆ ಬೌದ್ಧಿಕ ಸಾಮರ್ಥ್ಯವೂ ಉತ್ತಮವಾಗಿರಬೇಕು. ಹಾಗಾಗಿ ವಿದ್ಯಾರ್ಥಿ ದಿಸೆಯಿಂದಲೇ ಈ ಬಗ್ಗೆ ಕಾಳಜಿ ತೋರಿಸಬೇಕು. ದುಶ್ಚಟಗಳಿಗೆ ದಾಸರಾಗದೆ ದೇಹದಾರ್ಡ್ಯತೆ ಬೆಳೆಸಲು ಪೂರಕವಾಗುವ ದೈಹಿಕ ಕಸರತ್ತುಗಳನ್ನು ರೂಢಿಸಿಕೊಳ್ಳಬೇಕು. ಪತ್ರಿಕೆಗಳನ್ನು ಓದುವ ಮೂಲಕ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಬೇಕು. ಸೈನಿಕನಾದವನಿಗೆ ಸಾವು ಬೆನ್ನ ಹಿಂದೆ ಇರುತ್ತದೆ  ಎನ್ನುವ ಅರಿವು ಇದ್ದರೂ ದೇಶಕ್ಕಾಗಿ ಹೋರಾಡುವ ಅವಕಾಶ ಈ ಮೂಲಕ ಸಿಗುತ್ತದೆ. ಸೇನೆಯಲ್ಲಿ ಸೇವೆಗೆ ಸೇರಿದರೆ ಬದುಕಿನಲ್ಲಿ ಎಲ್ಲಾ ಸವಲತ್ತುಗಳು ಕುಟುಂಬದವರಿಗೂ ಸರ್ಕಾರದಿಂದ ಸಿಗುತ್ತದೆ ಎಂದರು.

ತಮ್ಮ 20 ವರ್ಷಗಳ ಸೇವಾವಧಿಯಲ್ಲಿ ಕಾಶ್ಮೀರದಲ್ಲಿ ಬಹುತೇಕ ಸಮಯ ಕಳೆದಿದ್ದ ಜನಾರ್ದನ ಕಾರ್ಗಿಲ್ ಕದನದ ಬಗ್ಗೆ ಮಾತನಾಡಿ,  ಇದು ಯುದ್ಧ ಅಲ್ಲ, ಕಾರ್ಯಾಚರಣೆ. ಯುದ್ಧವೆಂದರೆ ವಿಶ್ವಸಂಸ್ಥೆ ಮಾರ್ಗಸೂಚಿಯಂತೆ ಕೆಲವು ಮಾನದಂಡಗಳಿವೆ. ಹಾಗಾಗಿ ಕಾರ್ಗಿಲ್‌ನಲ್ಲಿ ನಡೆದಿದ್ದು ಆಪರೇಷನ್ ವಿಜಯ್ ಕಾರ್ಯಾಚರಣೆ. ಸ್ವಾತಂತ್ರ್ಯ ನಂತರ  ಚೈನಾ ಯುದ್ಧದಲ್ಲಿ ಹಿನ್ನಡೆ ಆದರೂ ಆನಂತರದ ಪಾಕಿಸ್ತಾನ ಯುದ್ಧದಲ್ಲಿ ಭಾರತ ವಿಜಯಿಯಾಯಿತು. ಭಾರತೀಯರು ಶಾಂತಿಪ್ರಿಯರು ಆದರೆ ಕಾಲು ಕೆರೆದು ಜಗಳಕ್ಕೆ ಬಂದರೆ ಏನಾಗುತ್ತದೆ ಎನ್ನುವ ಪಾಠವನ್ನು ಪಾಕಿಸ್ತಾನಕ್ಕೆ ಆಪರೇಷನ್ ವಿಜಯ್ ಕಾರ್ಯಾಚರಣೆ ಮೂಲಕ ಕಲಿಸಲಾಯಿತು.

ಕಾಶ್ಮೀರ ದಿಂದ 100 ಕಿ.ಮೀ. ದೂರದಲ್ಲಿ ಪರಿಸ್ಥಿತಿ ಗಂಭೀರವಾಗಿರುತ್ತದೆ. ಮನುಷ್ಯ ಜೀವನಕ್ಜೆ ಯೋಗ್ಯವಲ್ಲದ ಸ್ಥಳ ಅದು.  ಪಾಕಿಸ್ತಾನ ಸೈನ್ಯ ಅಲ್ಲಿ ನಿಯೋಜನೆ ಆಗಿರುವ ಬಗ್ಗೆ ಅಲೆಮಾರಿಗಳಿಂದ ಸೈನ್ಯಕ್ಕೆ ಮಾಹಿತಿ ಸಿಕ್ಕಿತು. ತಯಾರಿಯೇ ಇಲ್ಲದ   ಸ್ಥಿತಿಯಲ್ಲಿ ಕೂಡಲೇ  ಕಾರ್ಯಾಚರಣೆ ಆರಂಭ ಮಾಡಿದ ಸೇನೆ ಪಾಕಿಸ್ತಾನಿ ಸೈನಿಕರನ್ನು ಯಶಸ್ವಿಯಾಗಿ ಹಿಮ್ಮೆಟಿಸಿತು. ಒಂದು ವೇಳೆ ಕಾರ್ಗಿಲ್ ಪಾಕ್‌ ವಶವಾದರೆ‌ ಪಾಕ್ ಸೈನಿಕರಿಗೆ ಶ್ರೀನಗರಕ್ಕೆ ಬರುವುದು ಕಷ್ಟವಾಗಿರಲಿಲ್ಲ ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡರು.

ಪ್ರಾಸ್ತಾವಿವಾಗಿ ಮಾತನಾಡಿದ ವಿಜಯವಾಣಿ ಮೈಸೂರು ಬ್ಯೂರೋ ಸ್ಥಾನಿಕ ಸಂಪಾದಕ ಎಂ‌.ಆರ್. ಸತ್ಯನಾರಾಯಣ, ಭಾರತದಲ್ಲಿ  ಅಣ್ವಸ್ತ್ರ ಪರೀಕ್ಷೆ ನಂತರ ಭಾರತ ಮತ್ತು ಪಾಕಿಸ್ತಾನದಲ್ಲಿ ಒಂದು ರೀತಿಯ ಪ್ರಕ್ಷುಬ್ಧ ಸ್ಥಿತಿ ಇದ್ದು. ಈ ವೇಳೆ ಭಾರತದ ವಿರುದ್ಧ ಪಾಕಿಸ್ತಾನವನ್ನು ಎತ್ತಿಕಟ್ಟಿದ  ಭಾರತದ ಇತರ ಶತ್ರು ರಾಷ್ಟ್ರಗಳು ಕಾರ್ಗಿಲ್ ಯುದ್ಧಕ್ಕೆ ಪ್ರಚೋದನೆ ನೀಡಿದವು. ಆದರೆ ಭಾರತ ಈ ಯುದ್ಧದಲ್ಲಿ ವಿಜಯಿ ಆಯಿತು. ಹಾಗಾಗಿ ನಮ್ಮವರೇ ಆಗಿರುವ ಹುತಾತ್ಮ ಯೋಧರ ತ್ಯಾಗವನ್ನು ಸ್ಮರಿಸಲು ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುವಜನರಲ್ಲಿ ರಾಷ್ಟ್ರಭಕ್ತಿ, ದೇಶಪ್ರೇಮ ಬೆಳೆಸಲು ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಕೆ. ಪ್ರಕಾಶ್ ಮಾತನಾಡಿ, ಈ ನೆಲದಿಂದ ಉತ್ತಮ ಸಂದೇಶಗಳು ಜಗತ್ತಿಗೆ ಪಸರಿಸಿದೆ. ಪರೋಪಕಾರ, ಸೇವೆ, ಜಗತ್ತೇ ಒಂದು ಕುಟುಂಬ ಎನ್ನುವ ಪರಿಕಲ್ಪನೆ ಹುಟ್ಟಿದ್ದೇ ಭಾರತದಿಂದ. ಭಾರತ ಶಾಂತಿ ಪ್ರಿಯ ದೇಶ. ಭಾರತದ ‌ಮೇಲೆ ಯುದ್ಧಕ್ಕೆ ಬಂದ ಯಾರನ್ನೂ ನಮ್ಮ ಯೋಧರು ಸುಮ್ಮನೆ ಬಿಟ್ಟಲ್ಲ. ಸೈನಿಕರು ಸ್ವಾರ್ಥದಿಂದ ಯೋಚಿಸಿದ್ದರೆ ನಾವು ನೆಮ್ನದಿಯಿಂದವಿರುತ್ತಿರಲಿಲ್ಲ. ಸೈನಿಕರಿಗೆ ದೇಶದ ನಾಗರಿಕರು ಋಣಿ ಆಗಿರಬೇಕು ಎಂದರು.

ಸೇನೆಗೆ ಸೇರುವವರಿಗೆ ಉಚಿತವಾಗಿ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಾ ನೂರಕ್ಕೂ ಅಧಿಕ ಯುವಕರು ಸೇನೆಗೆ ಸೇರುವಲ್ಲಿ ಸಹಕರಿಸಿರುವ ಮಾಜಿ ಯೋಧ ಅಮೆ ಜನಾರ್ದನ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ದೇಶಭಕ್ತಿ ಗೀತೆಗಾಯನ, ಸ್ವರಚಿತ ಕವನಗಳ  ವಾಚನ ನಡೆಯಿತು.

ಮಡಿಕೇರಿ ವಿಜಯವಾಣಿ ಹಿರಿಯ ವರದಿಗಾರ ಸುನಿಲ್ ಪೊನ್ನೇಟಿ, ಸಂಸ್ಥೆಯ ಶಿಕ್ಷಕರಾದ ಮಂಜು ಸಿ.ಪಿ., ಚಿದಂಬರ್, ನಾಗೇಂದ್ರ, ದಿನೇಶ್, ಜಗದೀಶ್, ಹರಿಣಾಕ್ಷಿ, ತ್ರಿವೇಣಿ, ಗಾನವಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net