ಸಾರ್ವಜನಿಕರಲ್ಲಿ ದೇಶ ಪ್ರೇಮ ಅಗತ್ಯ

bmr
Published on

ಬ್ರಹ್ಮಾವರ: ದೇಶಕ್ಕೆ ಸ್ವಾತಂತ್ರೃ ತಂದು ಕೊಟ್ಟಿರುವುದನ್ನು ಉಳಿಸಿಕೊಳ್ಳುವಲ್ಲಿ ಸೇನೆಯ ಜತೆ ಸಾರ್ವಜನಿಕರಲ್ಲೂ ದೇಶ ಪ್ರೇಮ ಅಗತ್ಯ ಎಂದು ಬಾರಕೂರು ವಿದ್ಯಾಭಿವರ್ಧಿನಿ ಸಂಘದ ಕಾರ್ಯದರ್ಶಿ ಅಶೊಕ್ ಕುಮಾರ್ ಶೆಟ್ಟಿ ಹೇಳಿದರು.

ಬಾರಕೂರು ಹನೆಹಳ್ಳಿ ಶಾಲೆಯ ಕೇಂದ್ರ ಸರ್ಕಾರದ ಅಗ್ನಿವೀರ್ ಯೋಜನೆಗೆ ನೆರವಾಗುವ ಕೋಟಿ ಚೆನ್ನಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ 5ನೇ ತಂಡದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಪ್ರವಾಹದ ವಿರುದ್ಧ ಮೀನು ಈಜಿ ಮುನ್ನಡೆಯುವಂತೆ ಆಗಬೇಕೇ ಹೊರತು ಕಸದಂತೆ ನೀರಿನಲ್ಲಿ ತೇಲಿ ಹೋಗುವಂತಾಗಬಾರದು. ದೇಶ ಕಟ್ಟುವ ಕಾಯಕದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಸೇನಾ ಆಯ್ಕೆ ಪೂರ್ವ ತರಬೇತಿ ಪಡೆದ 100 ಮಂದಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳೇ ನಿರ್ಮಿಸಿದ ಬಸ್ ತಂಗುದಾಣವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಡುಪಿ ಜಿಲ್ಲಾ ಅಧಿಕಾರಿ ಹಾಕಪ್ಪ ಲಮಾಣಿ ಉದ್ಘಾಟಿಸಿದರು.

ನಿಲಯ ಪಾಲಕಿ ಶುಭಾ, ಹನೆಹಳ್ಳಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಪೂಜಾರಿ, ಹವಾಲ್ದಾರ್ ಮಹಾಂತೇಶ್, ಲ್ಯಾನ್ಸ್ ನಾಯಕ ಕೃಷ್ಣಪ್ಪ ಉಪಸ್ಥಿತರಿದ್ದರು. ಶಿಕ್ಷಕಿ ಭವ್ಯಾ ಪ್ರಾರ್ಥಿಸಿದರು. ಮುಖ್ಯ ತರಬೇತುದಾರ ಸುಬೇದಾರ್ ಜನಾರ್ದನ್ ಸ್ವಾಗತಿಸಿದರು. ಶಿಕ್ಷಕ ವಿವೇಕ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ವೀಣಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net