

ಸಿದ್ದಾಪುರ: ಪರದಾಸ್ಯದಿಂದ ದೇಶವನ್ನು ಮುಕ್ತಿಗೊಳಿಸಲು ಅತಿ ಹೆಚ್ಚು ಸ್ವಾತಂತ್ರ್ಯ ಯೋಧರನ್ನು ನೀಡಿರುವ ಹೆಚ್ಚುಗಾರಿಕೆ ಸಿದ್ದಾಪುರ ತಾಲೂಕಿಗಿದೆ. ಇಲ್ಲಿಯ ಜನತೆಗೆ ದೇಶಾಭಿಮಾನದ ಪಾಠ ಮಾಡಬೇಕಾದ ಅವಶ್ಯಕತೆ ಕಂಡುಬರುವುದಿಲ್ಲ ಎಂದು ಶಿರಳಗಿಯ ಶ್ರೀ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಶ್ರೀಗಳು ಹೇಳಿದರು.
ಪಟ್ಟಣದ ಶಂಕರಮಠದಲ್ಲಿ ಕೊಡಗಿನ ರಂಗಭೂಮಿ ಟ್ರಸ್ಟ್್ಟ ಪ್ರಸ್ತುತಪಡಿಸಿದ ಅಡ್ಡಂಡ ಕಾರ್ಯಪ್ಪ ರಚನೆಯ ಸತ್ಯವನ್ನೇ ಹೇಳುತ್ತೇನೆ ನಾಟಕ ಪ್ರದರ್ಶನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಪ್ರದರ್ಶಿಸಲ್ಪಡುತ್ತಿರುವ ನಾಟಕದ ರಚನಾಕಾರ ಅಡ್ಡಂಡ ಕಾರ್ಯಪ್ಪ ಅವರು ಎಡಚರ ಚಿಂತನೆಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವ ಕೆಚ್ಚೆದೆ ಹೊಂದಿದ್ದಾರೆ. ಈಗಾಗಲೇ ಐತಿಹಾಸಿಕ ಘಟನೆಗಳ, ವ್ಯಕ್ತಿಗಳ ಜೀವನದ ಕುರಿತು ಮರೆಮಾಚಿರುವ ಚರಿತ್ರೆಯ ಸತ್ಯವನ್ನು ಸಂಶೋಧಿಸಿ ಬಹಿರಂಗಪಡಿಸಿದ್ದಾರೆ. ಇಂತಹ ಕಾರ್ಯಗಳ ಮೂಲಕ ಭವಿಷ್ಯದ ಕುಡಿಗಳಲ್ಲಿ ದೇಶಪ್ರೇಮದ ಬೀಜ ಬಿತ್ತಬೇಕಾಗಿದೆ ಎಂದು ಹೇಳಿದರು.
ಆರ್ಎಸ್ಎಸ್ನ ಪ್ರಮುಖ ಜಗದೀಶಜಿ ಮಾತನಾಡಿ, ಇದು ರಾಷ್ಟ್ರೀಯ ಜಾಗರಣದ ಕಾರ್ಯಕ್ರಮ. ಇದು ಮನರಂಜನೆಯ ನಾಟಕವಾಗಿರದೆ ಶಿಕ್ಷಣದ ಕಮ್ಮಟವಾಗಿದೆ ಎಂದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಂ.ಕೆ. ತಿಮ್ಮಪ್ಪ, ತಾಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಅಧ್ಯಕ್ಷ ಆರ್.ಎನ್. ಹಳಕಾರ ಉಪಸ್ಥಿತರಿದ್ದರು. ಉಷಾ ಐನಕೈ ಪ್ರಾರ್ಥನೆ ಹಾಡಿದರು.
ಕಾರ್ಯಕ್ರಮ ಸಂಯೋಜಕ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ನ ಅನಂತಮೂರ್ತಿ ಹೆಗಡೆ ಸ್ವಾಗತಿಸಿದರು. ನಾಟಕ ರಚನಾಕಾರ ಅಡ್ಡಂಡ ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಸತ್ಯವನ್ನೇ ಹೇಳುತ್ತೇನೆ ನಾಟಕ ಪ್ರದರ್ಶನಗೊಂಡಿತು.