

ಮುಳಬಾಗಿಲು: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯರೆಲ್ಲರೂ ಪಾಲ್ಗೊಳ್ಳುವಂತೆ ಮಾಡುವಲ್ಲಿ ದಿನಪತ್ರಿಕೆಗಳ ಪಾತ್ರ ಪ್ರಮುಖವಾಗಿತ್ತು. ದೇಶಪ್ರೇಮದ ಕಿಚ್ಚು ಪ್ರತಿಯೊಬ್ಬ ದೇಶವಾಸಿ ಹೃದಯದಲ್ಲಿ ಪ್ರಜ್ವಲಿಸುವಂತೆ ಮಾಡಿದ್ದರಿಂದ ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿ ಸ್ವತಂತ್ರ ಭಾರತದಲ್ಲಿ ಜೀವಿಸಲು ಸಾಧ್ಯವಾಗಿದೆ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ ಹೇಳಿದರು.
ನಗರದ ಮುತ್ಯಾಲಪೇಟೆಯ ಶ್ರೀ ಗುರುದೇವ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಗುರುವಾರ ವಿಜಯವಾಣಿ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಿನಪತ್ರಿಕೆಗಳ ಪಾತ್ರ'& ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ವರದಾನವಾಗಿದ್ದು, ಪ್ರತಿದಿನ ಕೊಂಡು ಓದುವ ಮೂಲಕ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು ಎಂದರು.
ಓದುಗರು ದಿನಪತ್ರಿಕೆಗಳಿಂದ ದೂರ ಉಳಿಯುತ್ತಿರುವ ಕಾಲಘಟ್ಟದಲ್ಲಿ ವಿಆರ್ಎಲ್ ಮೀಡಿಯಾ ಲಿಮಿಟೆಡ್ನ ಸಿಎಂಡಿ ಡಾ.ವಿಜಯಸಂಕೇಶ್ವರ ಅವರು ದಿಟ್ಟ ಹೆಜ್ಜೆ ಇಟ್ಟು ಉತ್ತಮ ಸಂಪಾದಕೀಯ ಬಳಗದೊಂದಿಗೆ ವಿಜಯವಾಣಿ ಪತ್ರಿಕೆ ಆರಂಭಿಸಿ ನಗರ ಪ್ರದೇಶದಲ್ಲಿ ಅಲ್ಲದೆ ಹಳ್ಳಿ ಹಳ್ಳಿಗಳಿಗೆ ಪತ್ರಿಕೆ ತಲುಪಿಸುವ ವ್ಯವಸ್ಥೆ ಕಲ್ಪಿಸಿದ್ದಾರೆ. ಪತ್ರಿಕೆ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಕನ್ನಡದ ನಂ-.1 ಸ್ಥಾನ ಪಡೆದು ನಾಡಿನ ಜನತೆಗೆ ಕಟ್ಟಿಕೊಟ್ಟಿದ್ದಾರೆ. ಮೊಬೈಲ್ ಮತ್ತು ಅಂತರ್ಜಾಲಗಳಲ್ಲಿ ಸುಳ್ಳು ಸುದ್ದಿಗಳಿಗಿಂತ ಪತ್ರಿಕೆಗಳಲ್ಲಿ ಸಿಗುವ ನೈಜ ಸುದ್ದಿಗಳನ್ನು ಅಧ್ಯಯನ ಮಾಡಬೇಕೆಂದು ತಿಳಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಸತೀಶ್ ಕುಮಾರ್ ಮಾತನಾಡಿ, ಒಂದು ಪತ್ರಿಕೆ ಹತ್ತಾರು ಪುಟಗಳಲ್ಲಿ ವರ್ಣರಂಜಿತವಾಗಿ ಸಮಗ್ರ ಸುದ್ದಿ ಹೊತ್ತು ಮನೆ ಬಾಗಿಲಿಗೆ ತಲುಪಿಸುವಲ್ಲಿ ಪತ್ರಿಕೆಯ ಸಂಪಾದಕರಿಂದ ಹಿಡಿದು ವರದಿಗಾರರು ಮತ್ತು ಪತ್ರಿಕಾ ವಿತರಕರವರೆಗೂ ಪರಿಶ್ರಮವಿರುತ್ತದೆ. ದೇಶ ವಿದೇಶದ ಸುದ್ದಿಗಳೊಂದಿಗೆ ಸ್ಥಳಿಯ ಸಮಸ್ಯೆಗಳು ಒಳಗೊಂಡ ಸಮಗ್ರ ಸುದ್ದಿಗಳ ಜತೆಗೆ ಸಂಪಾದಕೀಯ, ವರದಿಗಳು, ಲೇಖನಗಳು, ಶ್ರೀಸಾಮಾನ್ಯರ ಜ್ಞಾನ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಆದರೆ ಯುವ ಜನರು ಮತ್ತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೊಬೈಲ್ನ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅನವಶ್ಯಕ ಸುದ್ದಿಗಳಿಗೆ ಜೋತು ಬೀಳದೆ ಪತ್ರಿಕೆಗಳನ್ನು ಓದುವ ಅಭಿರುಚಿ ಹೆಚ್ಚಿಸಿಕೊಳ್ಳಬೇಕು ಎಂದರು.
ವಿಶ್ವದ ಕೆಲವು ದೇಶಗಳಲ್ಲಿ ಪತ್ರಿಕಾ ಸ್ವಾತಂತ್ರ$್ಯಕ್ಕೆ ತಡೆ ಒಡ್ಡಲಾಗುತ್ತಿದೆ, ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪತ್ರಿಕಾ ಸ್ವಾತಂತ್ರ$್ಯಕ್ಕೆ ಧಕ್ಕೆ ತರಬಾರದು. ಅಧಿಕಾರಸ್ಥ ಜನಪ್ರತಿನಿಧಿಗಳು, ಅಧಿಕಾರಿಗಳು, ರಾಜಕಾರಣಿಗಳು ಸೇರಿ ಯಾರೇ ತಪ್ಪು ಮಾಡಿದರೂ ಅದನ್ನು ಕನ್ನಡಿಯ ರೀತಿ ಸಮಾಜಕ್ಕೆ ತೋರಿಸುವ ಕೆಲಸವನ್ನು ಪತ್ರಿಕಾರಂಗ ಮಾಡುತ್ತಿದೆ. ಇದನ್ನು ನಿಯಂತ್ರಣ ಮಾಡುವ ಹುನ್ನಾರ ಪರೋಕ್ಷವಾಗಿ ನಡೆಯುತ್ತಿದ್ದರೂ, ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಈ ಕ್ಷೇತ್ರಕ್ಕಿದೆ ಎಂದರು.
ಮುಳಬಾಗಿಲು ತಾಲೂಕು ವಿಜಯವಾಣಿ ವರದಿಗಾರ ಎ.ಅಪ್ಪಾಜಿ ಗೌಡ ಮಾತನಾಡಿ, ವಿಜಯವಾಣಿ ಪತ್ರಿಕೆ ಎಲ್ಲ ಪುಟಗಳು ಸುಂದರವಾಗಿ ಸುಸಂಸತ ವರದಿಗಳೊಂದಿಗೆ ಮನೆಬಾಗಿಲಿಗೆ ತಲುಪುತ್ತಿದೆ. ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಕಡಿಮೆ ಬೆಲೆಗೆ ಸಿಗುತ್ತಿದ್ದು. ಇದರ ಪ್ರಯೋಜನ ಪಡೆದು ಮುಖ್ಯ ವಾಹಿನಿಗೆ ಬರಬೇಕೆಂದು ತಿಳಿಸಿದರು.