

ಮಡಿಕೇರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಮಡಿಕೇರಿ ತಾಲೂಕಿನ ಎಲ್ಲಾ ಸ್ಕೌಟ್ಸ್, ಗೈಡ್ಸ್, ಕಬ್, ಬುಲ್ ಬುಲ್ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂರವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಪ್ರತಿಯೊಬ್ಬರು ಉತ್ತಮ ಪ್ರಜೆಗಳಾಗಿ ಗೌರವಿಸಬೇಕು ಎಂದು ಹೇಳಿದರು.
ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಒಳ್ಳೆಯ ಹೆಸರು ಮತ್ತು ಹವ್ಯಾಸಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ತಿಳಿಸಿದರು.
ನಂತರ ನೂತನ ಉಪಾಧ್ಯಕ್ಷರಾಗಿ ಕಡಗದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಣ್ಣ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಬಿ.ಎನ್.ರಮೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಹಾಗೂ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಪ್ರಮುಖರಾದ ಚಿಮ್ಮಂಡ ನೀಲಮ್ಮ, ಮತಿ ತಂಗಮ್ಮ, ಜಿಲ್ಲಾ ಸಂಘಟಕಿ ಮತಿ ದಮಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಜೇತರ ವಿವರ: ಸ್ಕೌಟ್ಸ್ ವಿಭಾಗದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಮಡಿಕೇರಿ(ಪ್ರ), ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಮಡಿಕೇರಿ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು. ಗೈಡ್ಸ್ ವಿಭಾಗದಲ್ಲಿ ಸಂತ ಮೈಕಲರ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಮಡಿಕೇರಿ(ಪ್ರ), ಸಂತ ಜೋಸೆಫರ ಆಂಗ್ಲ ಮಾಧ್ಯಮ ಎ ತಂಡ(ದ್ವಿ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾಟೆಕಾಡು ತೃತೀಯ ಸ್ಥಾನ ಪಡೆದುಕೊಂಡಿತ್ತು.
ಬುಲ್‌ಬುಲ್ ವಿಭಾಗದಲ್ಲಿ ಸಂತ ಜೋಸೆಫರ ಆಂಗ್ಲಮಾಧ್ಯಮ ಶಾಲೆಯ ಅನಘ(ಪ್ರ), ಹಾಗೂ ಐಕ್ಯ ದ್ವಿತೀಯ ಸ್ಥಾನ ಪಡೆದರು. ಕಬ್ಸ್ ವಿಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಗದಾಳು(ಪ್ರ), ಸಂತ ಜೋಸೆಫರ ಶಾಲೆ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮಡಿಕೇರಿ ದ್ವಿತೀಯ ಸ್ಥಾನ ಪಡೆಯಿತು.
ಸ್ಥಳೀಯ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಶಿಕ್ಷಕ ಶಿಕ್ಷಕಿಯರು ಹಾಗೂ ಪಾಲಕರು ಆಗಮಿಸಿದರು. ಸ್ಪರ್ಧೆಯಲ್ಲಿ ಹದಿನೆಂಟು ಶಾಲೆಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ವಿಭಾಗವಾರು ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಪ್ರಶಸ್ತಿ ಪತ್ರ ನೀಡಲಾಯಿತು.