* ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರ. ಕಾರ್ಯದರ್ಶಿ ದೊರೇಶ್ ಒತ್ತಾಯ
ಸಕಲೇಶಪುರ: ಸರ್ಕಾರ ಪ್ರಕಟಿಸಿರುವ ಸಿ ಆರ್ ಕರಡು ನಿಯಮಗಳನ್ನು ಮರುಪರಿಶೀಲಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ದೊರೇಶ್ ಒತ್ತಾಯಿಸಿದರು.
ಪಟ್ಟಣದ ಅಂಚೆ ಇಲಾಖೆ ಮುಂಭಾಗದಲ್ಲಿ ಪತ್ರ ಚಳವಳಿಗೆ ಚಾಲನೆ ನೀಡಿ ಮಾತನಾಡಿದ ಅವರು,
ಸರ್ಕಾರ ಅ. 16ರಂದು ಸಿ ಆರ್ ಕರಡು ನಿಯಮಗಳ ಪ್ರಕಟಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಎಲ್ಲಾ ಶಿಕ್ಷಕರ ಸಮ್ಮುಖದಲ್ಲಿ ಆಕ್ಷೇಪಣಾ ಪತ್ರವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೂ
ಕಳುಹಿಸಲಾಗಿದೆ ಎಂದರು.
ರಾಜ್ಯದ 1.8 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರು ಈ ಕರಡು ನಿಯಮಗಳ ವಿರುದ್ಧ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ.ಪ್ರತಿಯೊಬ್ಬ ಪ್ರಾಥಮಿಕ ಶಾಲಾ ಶಿಕ್ಷಕರು ಸೇವೆಯಲ್ಲಿ ಮುಂದುವರಿಯಲು ಟಿಇಟಿ ಅರ್ಹತೆ ಕಡ್ಡಾಯ ಎಂದು ಸೆ. 1ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪನ್ನು ಮರುಪರಿಶೀಲಿಸಲು ಈಗಾಗಲೇ ರಾಷ್ಟ್ರೀಯ ಶಿಕ್ಷಕರ ಸಂಘ ಮೇಲ್ಮನವಿಯನ್ನು ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಾವು ಪತ್ರ ಚಳವಳಿ ಮೂಲಕವೂ ಸರ್ಕಾರಕ್ಕೆ ಒತ್ತಡ ತರುತ್ತಿದ್ದೇವೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜು, ಸಿಆರ್‌ಪಿ ತೇಜಸ್, ಸಾವಿತ್ರಿಬಾಯಿ ಸಂಘದ ಅಧ್ಯಕ್ಷೆ ಉಮಾದೇವಿ, ಕಾರ್ಯದರ್ಶಿ ಮಮತಾ, ಪ್ರಕಾಶ್, ಜಗದೀಶಯ್ಯ, ಅನುಪಮಾ, ನಸೀಮಾ ಇತರರು ಇದ್ದರು.