ಪಟ್ಲದಮ್ಮ ಸಿಡಿ ಉತ್ಸವ

17 KRN-2
ಕೆ.ಆರ್.ನಗರ ತಾಲೂಕಿನ ಹರಂಬಳ್ಳಿ ಗ್ರಾಮದ ಪಟ್ಲದಮ್ಮ ದೇವರ ಸಿಡಿ ಮತ್ತು ಜಾತ್ರಾ ಮಹೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ನಡೆಯಿತು.
Published on

ಕೆ.ಆರ್.ನಗರ: ತಾಲೂಕಿನ ಹರಂಬಳ್ಳಿ ಗ್ರಾಮದ ಪಟ್ಲದಮ್ಮ ಸಿಡಿ ಮತ್ತು ಜಾತ್ರಾ ಮಹೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿತು.

ಹರಂಬಳ್ಳಿ ಗ್ರಾಮದ ಸುತ್ತಮುತ್ತಲಿನ ಭಾಗದ ಶಕ್ತಿ ದೇವತೆ ಪಟ್ಲದಮ್ಮ ಸಿಡಿ ಉತ್ಸವ ಅಂಗವಾಗಿ ಗ್ರಾಮದ ಜನರು ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ಸಿಡಿ ಹಬ್ಬದಂದು ಬೆಳಗ್ಗೆಯಿಂದಲೇ ದೇವಿಗೆ ವಿಶೇಷ ಪೂಜಾ ಕೈಂಕರ್ಯ ನಡೆದವು. ದೇವಸ್ಥಾನಕ್ಕೆ ವಿವಿಧ ಬಗೆಯ ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹಸಿರು ತೋರಣಗಳಿಂದ ದೇವಸ್ಥಾನ ಕಂಗೊಳಿಸುತ್ತಿತ್ತು. ರಾತ್ರಿ ಪಟ್ಲದಮ್ಮ ದೇವಸ್ಥಾನದ ಮುಂಭಾಗದಲ್ಲಿ ಕೊಂಡ ಹಾಕಲಾಗಿತ್ತು. ಭಕ್ತ ಕೊಂಡ ಹಾಯ್ದು ಹರಕೆ ತೀರಿಸಿದರು.

ಅಲ್ಲದೆ ಗ್ರಾಮದ ಈಶ್ವರ ದೇವಾಲಯದ ಮುಂಭಾಗ ಬಾಳೆಗೊನೆಗಳಿಂದ ಕಟ್ಟಲಾಗಿದ್ದ ಸಿಡಿಗೆ ದೇವಸ್ಥಾನದ ಆರ್ಚಕ ಚೆಲುವನಾಯಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಗ್ರಾಮಕ್ಕೆ ಉತ್ತಮ ಮಳೆ ಆಗಲಿ, ಉತ್ತಮ ಫಸಲು ಬರಲಿ ಎಂದು ಬೇಡಿಕೊಂಡರು. ಬಳಿಕ ಭಕ್ತರು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಗ್ರಾಮದ ರಸ್ತೆಯಲ್ಲಿ ಸಿಡಿ ಬಂಡಿ ಎಳೆದು ತಂದು ಪಟ್ಲದಮ್ಮ ದೇವಸ್ಥಾನದ ಮುಂಭಾಗದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಿಲ್ಲಿಸಿದರು.

ನೂತನ ದಂಪತಿ ಹಣ್ಣು-ದವನ ಎಸೆದು ದೇವಿಗೆ ಪ್ರಾರ್ಥನೆ ಸಲ್ಲಿಸಿದರು.

ಗ್ರಾಮದ ಯಜಮಾನರಾದ ಸಿದ್ದಪ್ಪಶೆಟ್ಟಿ, ನಂಜಪ್ಪ ಸುರೇಶ, ಚಿಕ್ಕೇಗೌಡ, ಚೆಲುವಯ್ಯ ಹಾಗೂ ಗ್ರಾಮದ ಚುನಾಯಿತ ಸದಸ್ಯರು, ಗ್ರಾಮ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net