ಗ್ಯಾರಂಟಿ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ, ಸರ್ಕಾರದ ಯೋಜನೆ ಜನಸಾಮಾನ್ಯರಿಗೆ ಆಸರೆ ಎಂದ ಪಾಟೀಲ

SHIRADON GUARANTEE HOUSE
ಚಡಚಣ ತಾಲೂಕಿನ ಶಿರಾಡೋಣ ಗ್ರಾಮದಲ್ಲಿ ಗೃಹ ಲಕ್ಷ್ಮಿ ಹಣದಲ್ಲಿ ಮನೆ ಕಟ್ಟಿಕೊಂಡ ಫಲಾನುಭವಿ ರಾಜ್ಯ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ (ಬ್ಯಾಡಗಿ) ಹಾಗೂ ಜಿಲ್ಲಾಧ್ಯಕ್ಷ ಇಲಿಯಾಸ್ ಬೋರಾಮಣಿ ಅವರನ್ನು ಸನ್ಮಾನಿಸಿದರು. ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ತಾಪಂ ಇಒ ಸಂಜಯ ಖಡಗೆಕರ ಇದ್ದಾರೆ.
Published on

ವಿಜಯಪುರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿಗೆ ಆಸರೆಯಾಗಿವೆ ಎಂದು ರಾಜ್ಯ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ (ಬ್ಯಾಡಗಿ) ಹೇಳಿದರು.

ಚಡಚಣ ತಾಲ್ಲೂಕಿನ ರೇವತಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಾಡೋಣ ಹಾಗೂ ಇಂಡಿ ತಾಲೂಕಿನ ಬಬಲಾದ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಅವರು ಸಂವಾದ ನಡೆಸಿದರು.

ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮನೆ ನಿರ್ಮಾಣ ಮಾಡಿಕೊಂಡ ಫಲಾನುಭವಿ ಮನೆಗೆ ಭೇಟಿ ನೀಡಿದ ಅವರು, ನೀಲಾಬಾಯಿ ಪಾಂಡ್ರೆ ಅವರೊಂದಿಗೆ ಸಂವಾದ ನಡೆಸುತ್ತಾ, ‘ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯು ಜನರ ಬದುಕಿನ ಆಸರೆಯಾಗಿವೆ. ಉತ್ತಮವಾಗಿ ಸದುಪಯೋಗ ಪಡೆದುಕೊಂಡು ಮಾದರಿಯಾಗಿರುವುದು ಸಂತಸವಾಗಿದೆ. ಗ್ಯಾರಂಟಿ ಯೋಜನೆಗಳ ಲಾಭ ಪಡೆದುಕೊಂಡು ಉತ್ತಮ ಜೀವನ ನಿರ್ವಹಿಸಬೇಕು ಎಂದು ಹೇಳಿದರು.

ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡ ಫಲಾನುಭವಿಗಳಾದ ಒಡಲಧ್ವನಿ ಒಕ್ಕೂಟದ ಸದಸ್ಯರನ್ನು ಭೇಟಿ ಮಾಡಿ ಚರ್ಚಿಸಿದರು. ಒಡಲ ಧ್ವನಿ ಒಕ್ಕೂಟದ ಸದಸ್ಯರು ಸಾವಯವ ಕೃಷಿ ಮಾಡಿ ಅದಕ್ಕೆ ಪೂರಕವಾಗಿ ಪರಿಶುದ್ಧವಾದ ಆಹಾರವನ್ನು ಒದಗಿಸುತ್ತಿರುವುದು ಅತ್ಯಂತ ಶ್ರೇಷ್ಠವಾದದ್ದು. ಸಾಮಾಜಿಕವಾಗಿ ಆರ್ಥಿಕವಾಗಿ ವಿಶೇಷವಾಗಿ ಶೈಕ್ಷಣಿಕವಾಗಿ ಉನ್ನತಿಗೆ ಸೌಲಭ್ಯಗಳು ಅತಿ ಮುಖ್ಯ. ಈಗಿನ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ತಮ್ಮ ಆರ್ಥಿಕ ಸುಸ್ಥಿರತೆಯನ್ನು ಸುಭದ್ರಪಡಿಸಿಕೊಳ್ಳಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಇಲಿಯಾಸ್ ಬೋರಾಮಣಿ, ಚಡಚಣದ ತಾಲ್ಲೂಕಾಧ್ಯಕ್ಷ ರವಿದಾಸ್ ಜಾಧವ, ಇಂಡಿ ಅಧ್ಯಕ್ಷ ಪ್ರಶಾಂತ ಕಾಳೆ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ತಾಪಂ ಇಒ ಸಂಜಯ ಖಡಗೆಕರ, ಶಿವದತ್ತ ಕೊಟ್ಟಲಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net