

ಚಿಕ್ಕೋಡಿ: ಮಾನವೀಯ ಮೌಲ್ಯ ಮರೆಯಾಗುತ್ತಿರುವ ಇತ್ತೀಚಿನ ದಿನಮಾನಗಳಲ್ಲಿ ಕುಂಗಟೋಳಿ ಪಾಟೀಲ ಕುಟುಂಬ ಅವಿಭಕ್ತ ಪರಂಪರೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ತಾಲೂಕಿನ ಕುಂಗಟೊಳ್ಳಿ ಗ್ರಾಮದಲ್ಲಿ ಸಹಕಾರಿ ಧುರೀಣ ಸಂಜಯ ಪಾಟೀಲ 50ನೇ ವರ್ಷದ ಜನ್ಮದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ‘50 ವರ್ಷ ಪೂರ್ತಿ ಹರ್ಷ ಸ್ಫೂರ್ತಿ’ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಸಹಕಾರ ರಂಗದ ಮೂಲಕ ಈ ಭಾಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಂಜಯ ಪಾಟೀಲ ಮತ್ತವರ ಕುಟುಂಬ ಅಪಾರ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.
ಕೆಎಲ್‌ಇ, ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟ, ಸಕ್ಕರೆ ಕಾರ್ಖಾನೆಗಳಲ್ಲಿ ಸೇವೆ ಸಲ್ಲಿಸಿ ಸಂಸ್ಕಾರಯುತ ಬದುಕಿನ ಮೂಲಕ ಪಾಟೀಲ ಕುಟುಂಬ ಜಿಲ್ಲಾ ರಾಜಕಾರಣದಲ್ಲಿ ಛಾಪು ಮೂಡಿಸಿ ಕುಂಗಟೋಳಿ ಗ್ರಾಮಕ್ಕೆ ವಿಶೇಷ ಮೆರುಗು ತಂದುಕೊಟ್ಟಿದೆ. ಅಜ್ಜ ದಿ.ಮಲಗೌಡ ಹಾಗೂ ತಂದೆ ದಿ.ರುದ್ರಗೌಡ ಪಾಟೀಲ ಅವರಿಂದ ಬಳುವಳಿಯಾಗಿ ಬಂದ ಸಮಾಜ ಸೇವೆಯನ್ನು ಅವರ ಮೂವರು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಮುಂದುವರಿಸಿದ್ದಾರೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಕಾರ್ಯಸಾಧನೆಗಳ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಕೋರೆ, ಕತ್ತಿ, ಕವಟಗಿಮಠ, ಮಿರ್ಜಿ,ಪಾಟೀಲ ಸೇರಿ ಇನ್ನಿತರ ಕುಟುಂಬಗಳು ಚಿಕ್ಕೋಡಿ ತಾಲೂಕು ರಾಜಕಾರಣದಲ್ಲಿ ಉತ್ತಮ ಸಂಬಂಧ ಬೆಸೆದಿದ್ದವು. ಕವಟಗಿಮಠ ಕುಟುಂಬದ ಸಾಮಾಜಿಕ ಬೆಳವಣಿಗೆಯಲ್ಲಿ ಕುಂಗಟೋಳಿ ಪಾಟೀಲ ಕುಟುಂಬದ ಹಿರಿಯ ತಲೆಮಾರಿನ ಕೊಡುಗೆಯಿದ್ದು, ಸಂಜಯ ಪಾಟೀಲ ಸಾಮಾಜಿಕ ಕಾರ್ಯ ಸುವರ್ಣ ಮಹೋತ್ಸವ ಮೂಲಕ ಮತ್ತಷ್ಟು ವೃದ್ಧಿಯಾಗಲಿ ಎಂದರು.
ಜನ್ಮದಿನ ಆಚರಿಸಿಕೊಂಡ ಸಹಕಾರಿ ಧುರೀಣ ಸಂಜಯಗೌಡ ಪಾಟೀಲ ಮಾತನಾಡಿ, ಸಮಾಜದಲ್ಲಿ ಹಿರಿಯರು ತೋರಿದ ಉತ್ತಮ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಾಧನೆ ಸುಲಭ ಸಾಧ್ಯವಾಗುತ್ತದೆ. ಡಾ.ಪ್ರಭಾಕರ ಕೋರೆ ಮನೆತನ, ಎಂ.ಕೆ ಕವಟಗಿಮಠ, ದಿ.ಉಮೇಶ ಕತ್ತಿ , ದಿ. ಶಾಂತಪ್ಪಣ್ಣ ಮಿರ್ಜಿ ಮನೆತನದ ಜತೆಗೆ ಜಿಲ್ಲೆಯ ಎಲ್ಲ ಹಿರಿಯರು ತೋರಿದ ಪ್ರೀತಿ ವಾತ್ಸಲ್ಯಕ್ಕೆ ನಮ್ಮ ಕುಟುಂಬ ಋಣಿಯಾಗಿದೆ ಎಂದರು.
ಸಂಗಮ ಶುಗರ್ಸ್‌ನ ರಾಜೇಂದ್ರ ಪಾಟೀಲ ಮಾತನಾಡಿ, ಸಂಜಯಕುಮಾರ ಅವರು ಹಿರಿಯರ ದಾರಿಯಲ್ಲಿ ನಡೆದು ಗ್ರಾಮೀಣ ಭಾಗದಲ್ಲಿ ರೈತರ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ನಮ್ಮದು ನಮ್ಮವರೆನ್ನುವ ಭಾವ ಹೊಂದಿರುವ ಸಂಜಯಗೌಡರು ಶತಾಯುಷಿಯಾಗಲಿ ಎಂದು ಹಾರೈಸಿದರು. ನಿತಿನ ದೇವರು ಸಾನ್ನಿಧ್ಯ ವಹಿಸಿದ್ದರು. ಕುಸುಮಾವತಿ ರುದ್ರಗೌಡ ಪಾಟೀಲ, ಮಹೇಶ ಭಾತೆ, ಬಸವರಾಜ ಪಾಟೀಲ, ಬಸವರಾಜ ಭಾತೆ, ರಾಜು ಪಾಟೀಲ, ಸುಭಾಷ ಕವಲಾಪುರೆ, ಅನಿಲ ಸದಲಗೆ, ಸಂತೋಷ ಜೋಗಳೆ, ಸುರೇಶ ಬೆಲ್ಲದ, ಸುರೇಶ ಘರಬುಡೆ ಇತರರು ಇದ್ದರು. ಬಸವರಾಜ ಪಾಟೀಲ ಸ್ವಾಗತಿಸಿದರು. ಮಹಾದೇವ ಕಮತೆ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಕಮತೆ ವಂದಿಸಿದರು.