ವೈದ್ಯರಿಲ್ಲದೆ ರೋಗಿಗಳ ಪರದಾಟ

FotoJet
Published on

ಜಿ.ನಾಗರಾಜ್​, ಬಂಗಾರಪೇಟೆ

ಆಯುಷ್ಮಾನ್​ ಆರೋಗ್ಯ ಕೇಂದ್ರದಲ್ಲಿ ಕಳೆದ ಒಂದು ವರ್ಷದಿಂದ ಸಮುದಾಯ ಆರೋಗ್ಯ ಅಧಿಕಾರಿಗಳಿಲ್ಲದೇ ರೋಗಿಗಳು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಹೌದು..! ಗ್ರಾಮೀಣ ಭಾಗದವರಿಗೆ ಪ್ರಾಥಮಿಕ ಹಂತದ ಆರೋಗ್ಯ ಸೇವೆ ನೀಡುವ ಸಲುವಾಗಿ ಆಯುಷ್ಮಾನ್​ ಭಾರತ್​, ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಪ್ರಾರಂಭಿಸಲಾಗಿತ್ತು. ಅದರಂತೆ ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಗ್ರಾಮದಲ್ಲಿಯೂ ಕೇಂದ್ರ ಆರಂಭಿಸಿ ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸೇವೆ ಒದಗಿಸಲಾಗುತ್ತಿದೆ. ಕೇಂದ್ರದ ಮೂಲಕ ಗ್ರಾಮೀಣ ಭಾಗದವರಿಗೆ ಆರೋಗ್ಯದ ಕುರಿತು ಜಾಗೃತಿ, ಗರ್ಭ ನಿರೋಧಕ ವಿಧಾನಗಳ ಸೇವೆ ಸೇರಿ ಹಲವು ಅಗತ್ಯ ಸೇವೆಗಳನ್ನು ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಒದಗಿಸಲಾಗುತ್ತಿತ್ತು. ಆದರೆ ಕಳೆದ ಕೆಲ ದಿನಗಳಿಂದ ಆಯುಷ್ಮಾನ್​ ಆರೋಗ್ಯ ಕೇಂದ್ರ ಎಂದು ಬದಲಾಯಿಸಲಾಯಿತು. ಹೆಸರು ಬದಲಾಯಿಸಿದರೂ ಗ್ರಾಮೀಣ ಭಾಗದವರಿಗೆ ಇದರಿಂದ ಉಪಯೋಗ ಇಲ್ಲದಂತಾಗಿದೆ. ಗ್ರಾಮದಲ್ಲಿ ನರ್ಸ್​ ಒಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರು ಆರೋಗ್ಯ ಇಲಾಖೆಯ ಹತ್ತಾರು ಕೆಲಸಗಳನ್ನು ಪೂರೈಸುವುದರಿಂದ ರೋಗಿಗಳ ಆರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಕೆಲವು ಲಸಿಕಾ ಕಾರ್ಯಗಳನ್ನು ಸಹ ಕೇಂದ್ರದಲ್ಲಿಯೇ ನಡೆಸುತ್ತಿರುವುದರಿಂದ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ. ಕೇಂದ್ರದ ಹಳೇ ಕಟ್ಟಡ ಶಿಥಿಲಗೊಂಡಿದ್ದು, ಯಾರೂ ಇಲ್ಲದ ಕಾರಣ ಕೆಲವರು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ. ಆದ್ದರಿಂದ ಕಟ್ಟಡ ದುರಸ್ತಿ ಮಾಡಿ ಸಮುದಾಯ ಆರೋಗ್ಯ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

"ಗ್ರಾಮದ ಆರೋಗ್ಯ ಕೇಂದ್ರ ಕೇವಲ ಕಾಟಾಚಾರಕ್ಕೆ ತೆರೆದಂತಿದ್ದು, ಕೇಂದ್ರದಲ್ಲಿ ಯಾರೂ ಸಹ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆ ಎದುರಾದರೆ ಬಂಗಾರಪೇಟೆ ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ."

> ವೆಂಕಟೇಶ್​

ಪಿಎಲ್​ಡಿ ಬ್ಯಾಂಕ್​ ನಿರ್ದೇಶಕ, ಹುಲಿಬೆಲೆ

"ಆಯುಷ್ಮಾನ್​ ಆರೋಗ್ಯ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯು ಕೆಲಸ ಮಾಡುತ್ತಾ ಅಲ್ಲಿನ ಗ್ರಾಮಸ್ಥರಿಗೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುತ್ತಿತ್ತು. ಅಲ್ಲಿ ಅಧಿಕಾರಿ ಇಲ್ಲದ ಕಾರಣ ಸಮಸ್ಯೆ ಎದುರಾಗಿರಬಹುದು. ಶೀಘ್ರವಾಗಿ ಸಮಸ್ಯೆ ಬಗೆಹರಿಸಲಾಗುತ್ತದೆ."

> ಡಾ.ಸುನೀಲ್​ ಟಿಎಚ್​ಒ ಬಂಗಾರಪೇಟೆ

ಸಣ್ಣ&ಪುಟ್ಟ ಆರೋಗ್ಯ ಸಮಸ್ಯೆಗೂ ಚಿಕಿತ್ಸೆ ಇಲ್ಲ: ಹುಲಿಬೆಲೆ ಪಂಚಾಯಿತಿ ಕೇಂದ್ರವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರೋಗ್ಯ ಸಮಸ್ಯೆ ಉಂಟಾದರೆ ಆಯುಷ್ಮಾನ್​ ಆರೋಗ್ಯ ಕೇಂದ್ರದಲ್ಲಿ ಸಮುದಾಯ ಆರೋಗ್ಯಾಧಿಕಾರಿಯ ಮೂಲಕ ಸಣ್ಣ&ಪುಟ್ಟ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಳೆದ ಒಂದು ವರ್ಷದ ಹಿಂದೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯಾಧಿಕಾರಿ ವರ್ಗಾವಣೆಯಾದ ನಂತರ ಅವರ ಸ್ಥಾನಕ್ಕೆ ಯಾರನ್ನೂ ನಿಯೋಜನೆ ಮಾಡದ ಕಾರಣ ಕೆಮ್ಮು, ನೆಗಡಿ, ಜ್ವರದಂತಹ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೆ ಬಂಗಾರಪೇಟೆ ತಾಲೂಕು ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net