ರೋಗಿಗಳನ್ನು ರಸ್ತೆಬದಿ ಬಿಟ್ಟು ಹೋದರು!

rogi new
Published on

ಮಂಗಳೂರು: ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ವೃದ್ಧ ರೋಗಿಗಳನ್ನು ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್‌ನಲ್ಲಿ ಕರೆತಂದು ಬೀದಿಬದಿ ಬಿಟ್ಟುಹೋದ ಅಮಾನವೀಯ ಘಟನೆ ಗುರುವಾರ ಸಾಯಂಕಾಲ ನಗರದಲ್ಲಿ ನಡೆದಿದೆ. ಘಟನೆ ಕುರಿತು ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಉಪ್ಪಿನಂಗಡಿಯ ರಘುರಾಮ, ಫರಂಗಿಪೇಟೆ ಪೊಳಲಿ ರಸ್ತೆ ಬೆಂಜನಪದವಿನ ಶ್ರೀನಿವಾಸ, ತಲಪಾಡಿಯ ರಮೇಶ ಮತ್ತು ಪುತ್ತೂರಿನ ಸುಂದರ ಸಂತ್ರಸ್ತ ರೋಗಿಗಳು. ಇವರು ಹೃದಯ ಸಂಬಂಧಿ ಕಾಯಿಲೆ, ಕಾಲು ನೋವು, ಮಧುಮೇಹ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದು, ಎಲ್ಲರೂ 60ಕ್ಕಿಂತ ಹೆಚ್ಚು ವಯಸ್ಸಿನವರು.

ರಾತ್ರಿ ಗಾಳಿ ಮಳೆಗೆ ಮಂಗಳೂರು ಕಂಕನಾಡಿ ಮಾರುಕಟ್ಟೆ ಬಳಿ ಅತಂತ್ರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಕಂಡ ಆಟೋ ಚಾಲಕರು ಪ್ರಶ್ನಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಅದೇ ದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಪತ್ರ ಅವರ ಬಳಿ ಇತ್ತು. ಉಟ್ಟ ಬಟ್ಟೆಯಲ್ಲೇ ಬೀದಿಗೆ ಬಿದ್ದ ಅವರಿಗೆ ತಕ್ಷಣಕ್ಕೆ ರಿಕ್ಷಾ ಚಾಲಕರು, ಮಾರುಕಟ್ಟೆ ವ್ಯಾಪಾರಿಗಳು ಹಾಗೂ ಸ್ಥಳೀಯರು ತಂಗುದಾಣದ ಶೆಡ್‌ನಲ್ಲೇ ಊಟ, ನೀರು, ಮಲಗಲು ಬೆಡ್‌ಶೀಟ್, ಹೊದಿಕೆ ತಂದು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಇಎಸ್‌ಐ ಆಸ್ಪತ್ರೆಗೆ ದಾಖಲು: ವಿಷಯ ಬಹಿರಂಗಗೊಳ್ಳುತ್ತಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿದೆ. ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಾಲ್ವರನ್ನೂ ಶಿವ‌ಭಾಗ್‌ನಲ್ಲಿರುವ ಇಎಸ್‌ಐ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೆನ್ಲಾಕ್‌ನಿಂದ ಶಿಫ್ಟ್ ಆಗಿದ್ದವರಲ್ಲ: ಬೀದಿಗೆ ಬಿದ್ದ ನಾಲ್ವರು ರೋಗಿಗಳು ವೆನ್ಲಾಕ್ ಜಿಲ್ಲಾಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಬದಲಾದ ಸಂದರ್ಭ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತದ ಸೂಚನೆಯಂತೆ ಸ್ಥಳಾಂತರಗೊಂಡ ರೋಗಿಗಳು ಎಂಬುದನ್ನು ಆರೋಗ್ಯ ಇಲಾಖೆ ನಿರಾಕರಿಸಿದೆ. ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯೂ ರೋಗಿಗಳು ಸ್ಥಳಾಂತರಗೊಂಡವರು ಅಲ್ಲ ಎಂದು ತಿಳಿಸಿದೆ. ಈ ನಾಲ್ವರು 2019ರ ಸೆಪ್ಟೆಂಬರ್- ನವೆಂಬರ್ ಅವಧಿಯಲ್ಲಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ನಮ್ಮ ಟ್ರಸ್ಟ್ ಮೂಲಕವೇ ಅವರಿಗೆ ಉಚಿತ ಚಿಕಿತ್ಸೆ, ಉಪಾಹಾರ ನೀಡಲಾಗುತ್ತಿತ್ತು. ಮೂರು ತಿಂಗಳ ಹಿಂದೆಯೇ ಅವರ ಬಿಡುಗಡೆಯಾಗಬೇಕಾಗಿತ್ತು. ಶುಕ್ರವಾರ ಅವರು ಊರಿಗೆ ತಲುಪಲು ಅಗತ್ಯ ಹಣ ಒದಗಿಸಿ ಮಂಗಳೂರು ತನಕ ಆಸ್ಪತ್ರೆ ಆ್ಯಂಬುಲೆನ್ಸ್‌ನಲ್ಲಿಯೇ ತಲುಪಿಸಲಾಗಿದೆ ಎಂದು ತಿಳಿಸಿದೆ.

ರಸ್ತೆ ಬದಿ ಅತಂತ್ರರಾಗಿದ್ದ ಸ್ಥಿತಿಯಲ್ಲಿದ್ದ ನಾಲ್ವರು ರೋಗಿಗಳನ್ನು ಮಂಗಳೂರು ಇಎಸ್‌ಐ ಆಸ್ಪತ್ರೆಗೆ ಸೇರ್ಪಡೆಗೊಳಿಸಲಾಗಿದೆ. ಒಟ್ಟು ಘಟನೆ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಗಿದೆ. - ಸಿಂಧೂ ಬಿ.ರೂಪೇಶ್, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net