

ಮಂಗಳೂರು: ಕೊಯಮತ್ತೂರಿನಲ್ಲಿ ಅನಾರೋಗ್ಯದಿಂದ ಇದ್ದ ವ್ಯಕ್ತಿಯೋರ್ವರನ್ನು ಏರ್ ಆಂಬುಲೆನ್ಸ್ ಮೂಲಕ ಮಂಗಳವಾರ ರಾತ್ರಿ ಮಂಗಳೂರಿಗೆ ಕರೆತರಲಾಯಿತು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಯಮತ್ತೂರಿನಿಂದ ರಾತ್ರಿ 7.43ಕ್ಕೆ ಆಗಮಿಸಿದ ಏರ್ ಆಂಬುಲೆನ್ಸ್ ರೋಗಿ ಹಾಗೂ ಅವರ ಪತ್ನಿಯನ್ನು ಇಳಿಸಿ 8.05ಕ್ಕೆ ಮರಳಿತು.
ವಿಮಾನ ನಿಲ್ದಾಣದಿಂದ ರೋಗಿಯನ್ನು ಪ್ರತ್ಯೇಕ ಆಂಬುಲೆನ್ಸ್ನಲ್ಲಿ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಕೊಯಮತ್ತೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮಾತುಕತೆ ಬಳಿಕ ಈ ಪ್ರಕ್ರಿಯೆ ನಡೆದಿದೆ.
ಮಂಗಳೂರು ಮಂಗಳಾದೇವಿ ಸಮೀಪದ ನಿವಾಸಿಯಾಗಿರುವ ದುರ್ಗಾದಾಸ್ ಹೆಗ್ಡೆ (65) ಏರ್ ಆ್ಯಂಬುಲೆನ್ಸ್ನಲ್ಲಿ ಮಂಗಳೂರಿಗೆ ಕರೆತಂದ ರೋಗಿ. ಇವರು ಕೊಯಮತ್ತೂರಿನ ಟೀ ಎಸ್ಟೇಟ್ ಒಂದರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ದೇಶದಾದ್ಯಂತ ಕರೊನಾ ಭೀತಿ ಇರುವ ಹಿನ್ನೆಲೆಯಲ್ಲಿ ದುರ್ಗಾದಾಸ್ ಅವರನ್ನು ಕೊಯಮತ್ತೂರು ಬಿಡುವ ಮೊದಲು ಕರೊನಾ ಸೋಂಕು ಇದೆಯೇ ಎಂದು ಪರೀಕ್ಷಿಸಲಾಗಿದ್ದು, ನೆಗೆಟಿವ್ ಫಲಿತಾಂಶ ಬಂದಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಮಂಗಳೂರು ಆಸ್ಪತ್ರೆಗೆ ಕರೆತಂದ ಕೂಡಲೇ ಐಸೋಲೇಶನ್ ವಾರ್ಡ್‌ನಲ್ಲಿ ಇರಿಸಲಾಗಿದೆ. ಬುಧವಾರ ಅವರ ಗಂಟಲು ದ್ರವದ ಮಾದರಿಯನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲು ಉದ್ದೇಶಿಸಲಾಗಿದೆ. ಅದರ ಫಲಿತಾಂಶ ಬಂದ ಬಳಿಕ ಅವರಿಗೆ ಅನಾರೋಗ್ಯದ ಚಿಕಿತ್ಸೆ ಆರಂಭಗೊಳ್ಳಲಿದೆ.