ಪುಸ್ತಕ ಬರೆಯಲು ಸಹನೆ ಮುಖ್ಯ

1kmt2_Pustaka
Published on

ಕುಮಟಾ: ತಾಲೂಕಿನ ದೀವಗಿ ಹಾಲಕ್ಕಿ ಸಮುದಾಯ ಸಭಾಭವನದಲ್ಲಿ ಡಿಜೆವಿಎಸ್ ಪ್ರೌಢಶಾಲೆ ಹಾಗೂ ಅಭಿನವ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಸಾಹಿತಿ ಟಿ.ಜಿ.ಭಟ್ಟ ಹಾಸಣಗಿ ರಚಿಸಿದ ‘ಮಳೆ ನಾಡಲ್ಲಿ ಹೂ ಡೇರೆ’ ಎಂಬ ಪುಸ್ತಕವನ್ನು ಶಾಸಕ ದಿನಕರ ಶೆಟ್ಟಿ ಮಂಗಳವಾರ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಶಾಸಕ ಶೆಟ್ಟಿ, ಒಂದು ಸುಂದರ ಹೂವಿನ ಹೆಸರಿನಲ್ಲಿ ಬರೆದ ಪುಸ್ತಕ ತುಂಬ ಸೊಗಸಾಗಿದೆ. ಪುಸ್ತಕ ಬರೆಯುವುದು ಸುಲಭದ ಕೆಲಸವಲ್ಲ. ಅದಕ್ಕೆ ಸಹನೆ ಬೇಕಾಗುತ್ತದೆ. ಟಿ.ಜಿ.ಭಟ್ಟ ಅವರು ಉತ್ತಮ ಕವಿಗಳೂ ಆಗಿರುವುದರಿಂದ ಇವೆಲ್ಲ ಅವರಿಗೆ ಸುಲಭಸಾಧ್ಯ. ಅವರಿಂದ ಇನ್ನೂ ಅನೇಕ ಉತ್ತಮ ಕೃತಿಗಳು ಹೊರಬರಲಿ ಓದುಗರಿಗೆ ಸಂತಸ ತರಲಿ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್​ನ ಅಧ್ಯಕ್ಷ ಪ್ರಮೋದ ನಾಯ್ಕ ಮಾತನಾಡಿ, ಟಿ.ಜಿ. ಭಟ್ಟ ಹಾಸಣಗಿ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ತುಂಬಾ ಅರ್ಥಪೂರ್ಣವಾಗಿ ಸುಂದರವಾದ ಸಾಲುಗಳನ್ನು ಹೊಂದಿರುತ್ತವೆ. ಮಳೆ ನಾಡಲ್ಲಿ ಹೂ ಡೇರೆ ಕೃತಿಯಲ್ಲಿ ಸಾಹಿತ್ಯದ ಅನೇಕ ಪ್ರಕಾರಗಳು ಕಾಣಬಹುದು. ಡೇರೆ ಹೂವು ಅವನತಿಯ ಹಂತ ತಲುಪಿದ್ದು, ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿಯೂ ಈ ಕೃತಿ ಸಹಕಾರಿ ಎಂದರು.

ಹೊನ್ನಾವರ ಎಸ್​ಡಿಎಂ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಪೊ›. ನಾಗರಾಜ ಹೆಗಡೆ ಅಪಗಾಲ ಕೃತಿ ಪರಿಚಯಿಸಿದರು. ಕೃತಿಕಾರ ಪೊ›.ಟಿ.ಜಿ.ಭಟ್ಟ ಹಾಸಣಗಿ, ಅಧ್ಯಕ್ಷತೆ ವಹಿಸಿದ್ದ ದೀವಗಿ ಗ್ರಾ.ಪಂ. ಅಧ್ಯಕ್ಷ ಜಗದೀಶ ಭಟ್ಟ ಮಾತನಾಡಿದರು.

ಬಿಎಡ್ ವಿದ್ಯಾರ್ಥಿ ಸಂದೀಪ ಮರಾಠಿ ಶಿರಸಿ ಮಳೆ ನಾಡಲ್ಲಿ ಹೂ ಡೇರೆ ಕೃತಿಯೊಳಗಿನ ಹಾಡನ್ನು ಹಾಡಿ ರಂಜಿಸಿದರು. ಮುಖ್ಯ ಶಿಕ್ಷಕ ಭಾಸ್ಕರ ಭಟ್ಟ ಪರಿಚಯಿಸಿ, ಸ್ವಾಗತಿಸಿದರು. ಅಭಿನವ ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷ ಹೇಮಂತಕುಮಾರ ಗಾಂವಕರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net