ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಲ್ಲಿ ಆತ್ಮವಿಶ್ವಾಸ, ತಾಳ್ಮೆ ಅಗತ್ಯ: ದಯಾನಂದ್

Workshop
????????????????????????????????????
Published on

ಚಿಕ್ಕಮಗಳೂರು: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಪರಿಶ್ರಮಕ್ಕೆ ತಕ್ಕಂತೆ ಆತ್ಮವಿಶ್ವಾಸ, ತಾಳ್ಮೆ ಬೆಳೆಸಿಕೊಳ್ಳಬೇಕು. ಸಮಯದ ಪಾಲನೆ ಮಾಡಬೇಕು, ಓದಿನಲ್ಲಿ ಏಕಾಗ್ರತೆ ರೂಢಿಸಿಕೊಳ್ಳಬೇಕು ಎಂದು ಮುಜರಾಯಿ ಇಲಾಖೆ ಆಯುಕ್ತ ಕೆ.ಎ.ದಯಾನಂದ್ ಹೇಳಿದರು. 

ನಗರದ ಕುವೆಂಪು ಕಲಾಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಮತ್ತು ಶಿವಮೊಗ್ಗದ ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕಾರ್ಯಾಗಾರದಲ್ಲಿ ಮಾತನಾಡಿದರು. ಅಧ್ಯಯನ ವಿಷಯಗಳನ್ನು ಸರಳವಾಗಿ ಅರ್ಥೈಸಿಕೊಳ್ಳಲು ಸ್ಮಾರ್ಟ್‍ ವರ್ಕ್ ಮಾಡಬೇಕು. ಮಾನಸಿಕ ಒತ್ತಡಗಳು ಹಾಗೂ ನಕಾರಾತ್ಮಕ ಚಿಂತನೆಗಳನ್ನು ದೂರಮಾಡಿ ಕಠಿಣ ಪರಿಶ್ರಮದ ಮೂಲಕ ಅಧ್ಯಯನ ನಡೆಸಿದಲ್ಲಿ ಯಶಸ್ಸು ಸಾಧ್ಯವಾಗಲಿದೆ ಎಂದು ಅವರು ಪರೀಕ್ಷಾರ್ಥಿಗಳಿಗೆ ಹೇಳಿದರು.

ಸಾಧಿಸುವ ಹುಚ್ಚುತನ ಬೇಕು:
ಮನುಷ್ಯನ ಮನಸ್ಸಿನಲ್ಲಿ ಕಲಿಯುವ, ಸಾಧಿಸುವ ಹುಚ್ಚುತನವಿರಬೇಕು. ಯಾವ ಸಾಧಕನ ಹೆಸರು ನಾಲಿಗೆಯ ಮೇಲೆ ಸದಾ ಉಲಿಯುವುದೋ ಅವರು ಪುನರ್ಜನ್ಮವೆತ್ತಿದಂತೆ. ಶಂಕರಾಚಾರ್ಯರು, ಭಗತ್‍ಸಿಂಗ್, ಸ್ವಾಮಿ ವಿವೇಕಾನಂದರು ಹೀಗೆ ಹಲವು ಮಹನೀಯರಿದ್ದಾರೆ. ಅವರೆಲ್ಲ ಎಳೆ ವಯಸ್ಸಿನಲ್ಲೆ ಉತ್ತಮ ಸಾಧನೆ ತೋರಿ ಜನಮನದಲ್ಲಿ ಉಳಿದಿದ್ದಾರೆ. ಕೀಳರಿಮೆ, ನಕಾರಾತ್ಮಕ ಚಿಂತನೆ ಬಿಟ್ಟು ಬುದ್ಧಿವಂತರಾಗಲು ಮೆದುಳಿನಲ್ಲಿ ಚುರುಕುತನ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಡವರಿಗೂ ಉನ್ನತ ಹುದ್ದೆ ಸಿಕ್ಕಿದೆ:
ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪನ್ವಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಎಷ್ಟೋ ಬಡ ಕುಟುಂಬದ ಪ್ರತಿಭಾನ್ವಿತರು ಆಡಳಿತದಲ್ಲಿ ಉನ್ನತ ಹುದ್ದೆ ಪಡೆದಿದ್ದಾರೆ. ಕೀಳರಿಮೆ ಬಿಡಬೇಕು. ಕಠಿಣ ಪರಿಶ್ರಮದ ಜತೆಗೆ ಸಾಧಿಸುವ ಹಂಬಲ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕೆಎಎಸ್ ಪರೀಕ್ಷಾ ತಯಾರಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ಡಾ.ಕಾಂತರಾಜ್ ಮಾತನಾಡಿ ಇತ್ತೀಚಿನ ಪರೀಕ್ಷೆಗಳು ಕನ್ನಡ ಮಾಧ್ಯಮದಲ್ಲೂ ಇದ್ದು ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು. ಆ ನಿಟ್ಟಿನಲ್ಲಿ ಸವಾಲುಗಳನ್ನು ಎದುರಿಸಿ ನಿಲ್ಲುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಪರಿಶ್ರಮದ ಅಧ್ಯಯನ ನಡೆಸಿ:
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಮಾತನಾಡಿ ಅಧ್ಯಯನದ ಮುನ್ನ ತಳಪಾಯ ಗಟ್ಟಿಯಾಗಿರಬೇಕು. ಸಾಧಿಸುವ ಗುರಿ ಜತೆಗೆ ದೃಢವಿಶ್ವಾಸ, ಸ್ಪಷ್ಟತೆ ಇದ್ದು, ನಿರಂತರ ಪರಿಶ್ರಮ ವಹಿಸಿ ಅಧ್ಯಯನ ನಡೆಸಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಂಶೋಧನೆ ನಡೆಸುವ ವಿಜ್ಞಾನಿಗಳ ಸಾಮಥ್ ಬೇಕಾಗಿಲ್ಲ. ಸಾಮಾನ್ಯ ವಿಷಯ ಗ್ರಹಿಸುವ, ಅರ್ಥೈಸುವ ಸಾಮಥ್ರ್ಯ ಹೊಂದಿದ್ದಲ್ಲಿ ಉನ್ನತ ಹುದ್ದೆಯ ಪರೀಕ್ಷೆ ಎದುರಿಸಬಹುದು ಎಂದರು. ಸೂಕ್ತ ಮಾನಸಿಕ ತಯಾರಿಯೊಂದಿಗೆ 18 ತಿಂಗಳ ಕಾಲ ನಿರಂತರವಾಗಿ ಅಧ್ಯಯನ ಕೈಗೊಂಡಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಲಭವಾಗಿ ಹುದ್ದೆ ಗಿಟ್ಟಿಸಿಕೊಳ್ಳಬಹುದು. ಕೆಎಎಸ್, ಯುಪಿಎಸ್‍ಸಿ ಪರೀಕ್ಷೆ ವಿಷಯಗಳು ಮಹಾಸಾಗರವಿದ್ದಂತೆ. ಅಧ್ಯಯನದ ಪರಿಶ್ರಮವಿಲ್ಲದೇ ಸಾಧನೆ ಅಸಾಧ್ಯ ಎಂದು ಹೇಳಿದರು.

ಸಮಾಜಸೇವೆ ಹಂಬಲವಿದ್ದವರೇ ಬರಬೇಕು:
ವಿದ್ಯಾರ್ಥಿಗಳಲ್ಲಿ ಮೌಲ್ಯ ನಿರ್ಮಾಣ ಕುರಿತು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಉಪನ್ಯಾಸ ನೀಡಿ, ಸಮಾಜಸೇವೆಯ ಹಂಬಲ ಹೊಂದಿರುವವರು ಮಾತ್ರವೇ ಉನ್ನತ ಹುದ್ದೆಗೆ ಬರಬೇಕು. ಅಗತ್ಯ ಪಠ್ಯಕ್ರಮ ಕ್ರೋಢೀಕರಿಸಿ ಪೂರ್ವ ತಯಾರಿ ನಡೆಸಬೇಕು. ಜ್ಞಾನವಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಸಾಧಕರ ಛಲ ಇರಲಿ:
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಪ್ರಾಸ್ತಾವಿಕ ಮಾತನಾಡಿ ಸಮಾಜಕ್ಕಾಗಿ ಬದುಕುವವರ ಹೆಸರು ಅಜರಾಮರ. ಬುದ್ಧ, ಅಂಬೇಡ್ಕರ್, ಬಸವೇಶ್ವರ ಸೇರಿದಂತೆ ಅನೇಕ ಮಹನೀಯರು ಸಮಾಜದ ಏಳಿಗೆಗಾಗಿ ದುಡಿದವರು. ಅಂತಹ ಸಾಧಕರ ಛಲವನ್ನು ಸ್ಫೂರ್ತಿಯಾಗಿಸಿಕೊಂಡು ವಿದ್ಯಾರ್ಥಿಗಳು ಅಧ್ಯಯನ ಕೈಗೊಳ್ಳಬೇಕು ಎಂದು ತಿಳಿಸಿದರು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿ.ರಮೇಶ್, ಮನೋವೈದ್ಯ ಡಾ.ಅರವಿಂದ ತಿಮ್ಮಯ್ಯ, ಸುಬ್ರಹ್ಮಣ್ಯ, ಸಮನ್ವಯ ಟ್ರಸ್ಟ್ ನಿರ್ದೇಶಕ ಕಾಶಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಓಂಕಾರಸ್ವಾಮಿ, ಜಿಲ್ಲಾ ಸಂಘದ ಕಾರ್ಯದರ್ಶಿ ಸತ್ಯನಾರಾಯಣ, ಖಜಾಂಚಿ ಚಂದ್ರಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ವಸಂತಕುಮಾರ್, ಪೂರ್ಣೇಶ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net