ಪತಂಜಲಿ ಯೋಗಪೀಠಕ್ಕೆ ಪೇಜಾವರ ಶ್ರೀ ಭೇಟಿ

pejavara new
Published on

ಉಡುಪಿ: ಹರಿದ್ವಾರದ ಪತಂಜಲಿ ಯೋಗಪೀಠಕ್ಕೆ ಸೋಮವಾರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿದರು.

ಯೋಗಪೀಠದ ಮುಖ್ಯಸ್ಥ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಶ್ರೀಗಳನ್ನು ಗೌರವಿಸಿದರು. ಬಳಿಕ ಶ್ರೀಗಳು ಪತಂಜಲಿ ಆಯುರ್ವೇದ ಆಸ್ಪತ್ರೆ, ಆಯುರ್ವೇದ ವನ, ಪತಂಜಲಿ ಪೀಠದ ಉತ್ಪನ್ನಗಳ ಮಳಿಗೆಗಳನ್ನು ವೀಕ್ಷಿಸಿದರು. ಡಾ.ಲಲಿತ್ ಮೋಹನ್ ಮಿಶ್ರಾ ಪತಂಜಲಿ ಯೋಗ ಪೀಠದ ಎಲ್ಲ ವಿಭಾಗಗಳನ್ನು ಶ್ರೀಗಳಿಗೆ ಪರಿಚಯಿಸಿದರು. ಇಬ್ಬರೂ ಸಂಸ್ಕೃತದಲ್ಲೇ ಸಂಭಾಷಿಸಿದ್ದು ವಿಶೇಷವಾಗಿತ್ತು.

ಕನ್ಯಾಡಿ ಶಾಖಾ ಮಂದಿರಕ್ಕೆ ಭೇಟಿ: ಬೆಳ್ತಂಗಡಿಯ ಕನ್ಯಾಡಿ ಶ್ರೀರಾಮಕ್ಷೇತ್ರದ ಹರಿದ್ವಾರದ ಶಾಖೆಗೆ ಪೇಜಾವರ ಶ್ರೀಗಳು ಭೇಟಿಯಿತ್ತರು. ಕ್ಷೇತ್ರದ ವ್ಯವಸ್ಥಾಪಕ ನರೇಂದ್ರ ಗೌರವಿಸಿದರು. ಬಳಿಕ ಕನ್ಯಾಡಿ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರು ಶ್ರೀಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಆಶ್ರಮದ ಪ್ರಶಾಂತ ವಾತಾವರಣದ ಬಗ್ಗೆ ಶ್ರೀಗಳು ಸಂತಸ ವ್ಯಕ್ತಪಡಿಸಿದರು.

ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್, ವಿಷ್ಣು ಭಟ್, ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಪ್ರೇಮಪೀಠದ ಆಚಾರ್ಯ ಭೇಟಿ: ಐದು ಶತಮಾನಗಳ ಇತಿಹಾಸ ಇರುವ ರಾಜಸ್ಥಾನದ ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನದ ಪ್ರೇಮ ಪೀಠದ (ಸಂತ ಮೀರಾಬಾಯಿ ಪರಂಪರೆ) ಆಚಾರ್ಯ ಲಲಿತ್ ಮೋಹನ್ ಓಜಾ ಅವರು ಹರಿದ್ವಾರದ ಪೇಜಾವರ ಶಾಖಾ ಮಠದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಸಾಂಪ್ರದಾಯಿಕ ಪೇಟಾ ತೊಡಿಸಿ ಗೌರವಿಸಿದರು.

ಉಡುಪಿ ಅಷ್ಟಮಠಗಳೊಂದಿಗೆ ಪ್ರೇಮ ಪೀಠ ಉತ್ತಮ ಬಾಂಧವ್ಯ ಹೊಂದಿದೆ. ಈ ಕ್ಷೇತ್ರವನ್ನು ಓಜಾರವರು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಮಧ್ವಮತ ಪ್ರಸಾರ ನಡೆಸುತ್ತಿದ್ದಾರೆ. ಆದ್ದರಿಂದ ಉತ್ತರಭಾರತಕ್ಕೆ ಭೇಟಿ ಕೊಡುವ ಉಡುಪಿಯ ಸಮಸ್ತ ಕೃಷ್ಣ ಭಕ್ತರು ಅವಶ್ಯವಾಗಿ ಈ ಕ್ಷೇತ್ರಕ್ಕೆ ಆಗಮಿಸಬೇಕು ಎಂದು ಶ್ರೀಗಳು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net