ಜೈನ ತತ್ವಾಚರಣೆಗಳಿಂದ ಮೋಕ್ಷಕ್ಕೆ ಮಾರ್ಗ

10 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪವಿತ್ರ ಣಮೋಕಾರ ಮಂತ್ರದ ಅನುಸಂಧಾನವೂ ಸೇರಿದಂತೆ ಜೈನ ಧರ್ಮದ ವಿಶಿಷ್ಟ ತತ್ವಾಚರಣೆಗಳಿಂದ ಮೋಕ್ಷಕ್ಕೆ ಮಾರ್ಗ ಲಭಿಸುತ್ತದೆ ಎಂದು ಎಸ್‌ಡಿಎಂ ವೈದ್ಯಕೀಯ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನಕುಮಾರ ಹೇಳಿದರು.

ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀ ನೇಮಿನಾಥ ಜಿನಾಲಯದಲ್ಲಿ ಜರುಗಿದ 10 ದಿನಗಳ ದಶಲಕ್ಷಣ ಪರ್ವದ ಮಂಗಲದ ಅಂಗವಾಗಿ ಹಮ್ಮಿಕೊಂಡಿದ್ದ ಜೈನ ಧರ್ಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರಾವಕ- ಶ್ರಾವಕಿಯರು ನಿತ್ಯವೂ ಪಠಿಸುವ ಣಮೋಕಾರ ಮಂತ್ರದಲ್ಲಿ ಅಪಾರ ಶಕ್ತಿ ಸಂಚಯವಿದೆ. ಮನುಷ್ಯನ ರಾಕ್ಷಸೀ ಪ್ರವೃತ್ತ್ತಿಗಳನ್ನು ನಾಶಗೊಳಿಸಿ ಸತ್ಯ ಶುದ್ಧ ಜೀವನ ವಿಧಾನದ ಉಪಕ್ರಮಗಳನ್ನು ಹುಟ್ಟುಹಾಕಿ ಮುಕ್ತ ಭಾವಸಂಪನ್ನತೆಯನ್ನು ತುಂಬುತ್ತದೆ ಎಂದರು.

ಪ್ರಸ್ತುತ ಧರ್ಮಸ್ಥಳ ಕ್ಷೇತ್ರದ ಸುತ್ತ ಹೆಣೆದುಕೊಂಡಿದ್ದ ಕಾರ್ಮೋಡಗಳು ಕರಗಿವೆ. ಶ್ರೀ ಮಂಜುನಾಥಸ್ವಾಮಿಯ ಆಶೀರ್ವಾದದ ನೆರಳಿನಲ್ಲಿ ಭಕ್ತ ಸಂಕುಲಕ್ಕೆ ಸತ್ಯದ ದರ್ಶನವಾಗುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಜಿನತಪಸ್ವಿನಿ ಗಣಿನಿ ಆರ್ಯಿಕಾರತ್ನ ಶ್ರೀಜಿನವಾಣಿ ಮಾತಾಜಿ ಮಾತನಾಡಿ, ನೋಂಪಿ ಸೇರಿ ಧ್ಯಾನದ ಎಲ್ಲ ಆಚರಣೆಗಳು ನಿತ್ಯವೂ ಪ್ರಾತಃಕಾಲದ ಬ್ರಾಹ್ಮೀ ಮುಹೂರ್ತದಲ್ಲಿ ನಡೆಯಬೇಕು. ಆಗ ಮಾತ್ರ ಶ್ರಾವಕ- ಶ್ರಾವಕಿಯರು ಮಂತ್ರಗಳ ಪಠಣದ ತನ್ಮಯತೆಯಲ್ಲಿ ಧ್ಯಾನಸ್ಥ ಮನಸ್ಸನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.

ಟಿ.ಪಿ. ಅಷ್ಟಗಿ ಮಾತನಾಡಿ, ಚಾತುರ್ಮಾಸದ ಅನುಷ್ಠಾನದಲ್ಲಿರುವ ಮಾತಾಜಿಯವರು ನಡೆಸುವ ವಿವಿಧ ವ್ರತಾಚರಣೆಗಳಿಂದಾಗಿ ಅಮ್ಮಿನಬಾವಿ ಜಿನಾಲಯದಲ್ಲಿ ನಿತ್ಯವೂ ಹಬ್ಬದ ವಾತಾವರಣ ಉಂಟಾಗಿದೆ ಎಂದರು.

`ಜೀವನ ಶಿಕ್ಷಣ' ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ದಶಲಕ್ಷಣ ಪರ್ವದ 10 ದಿನಗಳ ಆಚರಣೆಗಳು ಶ್ರಾವಕ- ಶ್ರಾವಕಿಯರನ್ನು ದ್ವೇಷ, ಅಸೂಯೆ, ಸಂಘರ್ಷ, ವೈರುಧ್ಯಗಳಿಂದ ಮುಕ್ತಗೊಳಿಸಿ ಅಂತರAಗ ಮತ್ತು ಬಹಿರಂಗ ಶುದ್ಧಿಯ ಜೀವನ ವಿಧಾನದೊಂದಿಗೆ ಸಜ್ಜನಿಕೆಯ ಸಿಹಿ ಸಾಮರಸ್ಯವನ್ನು ಮೂಡಿಸುತ್ತವೆ ಎಂದರು.

ಪದ್ಮಲತಾ ನಿರಂಜನಕುಮಾರ, ಶಶಿಕಲಾ ದೇಸಾಯಿ, ಪಾರ್ಶ್ವನಾಥ ಪತ್ರಾವಳಿ, ಚಂದ್ರಕಾ0ತ ನವಲೂರ, ಮಹಾವೀರ ದೇಸಾಯಿ, ಅಜಿತಕುಮಾರ ದೇಸಾಯಿ, ದೀಪಕ ದೇಸಾಯಿ, ಬ್ರಹ್ಮಕುಮಾರ ದೇಸಾಯಿ, ಪದ್ಮರಾಜ ಜಾಯಕ್ಕನವರ, ಇತರರಿದ್ದರು.

ಶ್ರೀ ತ್ರಿಶಿಲಾಮಾತಾ ಮಹಿಳಾ ಮಂಡಳದ ಬೀನಾ ದೇಸಾಯಿ, ರಾಜೇಶ್ವರಿ ಪತ್ರಾವಳಿ, ಲಲಿತಾ ದೇಸಾಯಿ, ಪ್ರತೀಕ್ಷಾ ಲೋಕೂರ, ನಿವೇದಿತಾ ದೇಸಾಯಿ, ಸುಕನ್ಯಾ ಅಂಗಡಿ, ಇತರರು ಪದ್ಮಲತಾ ಅವರಿಗೆ ಉಡಿ ತುಂಬಿ ಗೌರವಿಸಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಸ್. ಪತ್ರಾವಳಿ ಸ್ವಾಗತಿಸಿದರು. ಅರುಣ ನವಲೂರ ನಿರೂಪಿಸಿದರು. ಜೈನ್ ಸಮಾಜ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net