

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಘೊಷಿಸದಂತೆ ಆಗ್ರಹಿಸಿ ಮಾ.3ರಂದು ನಗರದಲ್ಲಿ ಪ್ರತಿಭಟನೆ ನಡೆಸಲು ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ಅತ್ತಿಗುಂಡಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗ್ರಾಮಸ್ಥರು ನಿರ್ಣಯಿಸಿದರು.
ಹಿರೇಕೊಳಲೆ, ತಳಿಹಳ್ಳ, ಮೇಲಿನಹುಲುವತ್ತಿ, ಐಡಿ ಪೀಠ, ಮಲ್ಲೇನಹಳ್ಳಿ, ತೊಗರಿಹಂಕಲ್, ಅಲ್ಲಂಪುರ, ದಾಸಹಳ್ಳಿಯ ವ್ಯಾಪ್ತಿಯಲ್ಲಿ 15897 ಎಕರೆ ಪ್ರದೇಶವನ್ನು ಸಂರಕ್ಷಿತ ಮೀಸಲು ಮಾಡಲು ಮುಂದಾಗಿದ್ದಾರೆ. ಡೀಮ್್ಡ ಫಾರೆಸ್ಟ್ ಮತ್ತು ಕಂದಾಯ ಜಾಗವನ್ನು ಜಂಟಿ ಸರ್ವೆ ಮಾಡಿ ಜನವಸತಿ, ಊರಿನ ಅಭಿವೃದ್ಧಿ, ಸಾಗುವಳಿ ಮಾಡುತ್ತಿರುವ ಕೃಷಿಭೂಮಿಯನ್ನು ಬಿಟ್ಟು ಸಂರಕ್ಷಿತ ಪ್ರದೇಶ ಎಂದು ಘೊಷಿಸಲಿ ಎಂದು ವಿವಿಧ ಗ್ರಾಮಸ್ಥರು ಒತ್ತಾಯಿಸಿದರು.
ಈ ವ್ಯಾಪ್ತಿಯ ಗ್ರಾಪಂಗಳಲ್ಲಿ 94ಸಿ, 94ಸಿಸಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇ ಮಾಡಿ ಬಡವರಿಗೆ ನಿವೇಶನ ನೀಡಬೇಕು. ಸರ್ಕಾರ ಅರ್ಜಿ ಹಾಕಲು ನೀಡಿರುವ ಸಮಯ ಪೂರ್ಣಗೊಳ್ಳಬೇಕು. ಫಾಮ್ರ್ 57ರಲ್ಲಿ ಅರ್ಜಿ ಹಾಕಿರುವವರಿಗೆ ಹಕ್ಕುಪತ್ರ ನೀಡಿ, ಉಳಿಕೆ ಜಾಗವನ್ನು ಮೀಸಲು ಪ್ರದೇಶ ಎಂದು ಘೊಷಿಸಿದರೆ ನಮ್ಮ ಅಭ್ಯಂತರವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಈಗಾಗಲೇ ಹೇಳಿರುವಂತೆ ಶಾಲೆ, ರುದ್ರಭೂಮಿ ಜಾಗಗಳನ್ನು ಸರ್ವೆ ಮಾಡಿ ಬಾಂದ್ ಕಲ್ಲುಗಳನ್ನು ಹಾಕಿ ರೈತರು ಜಮೀನಿಗೆ ಓಡಾಡುವ ರಸ್ತೆಗಳನ್ನು ಗುರುತಿಸಬೇಕು. ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಂದ ಗ್ರಾಮಗಳಲ್ಲಿರುವ ಜಾನುವಾರು ಗಣತಿ ಮಾಡಿ ಅದಕ್ಕನುಗುಣವಾಗಿ ಗೋಮಾಳ ಮೀಸಲಿಟ್ಟು ಉಳಿದ ಜಾಗವನ್ನು ಮೀಸಲು ಎಂದು ಘೊಷಿಸಬೇಕು. ಈ ಬೇಡಿಕೆ ಈಡೇರಿಸಿದರೆ ಜಲ, ಅರಣ್ಯ ಸಂರಕ್ಷಣೆಗೆ ಸರ್ಕಾರದೊಂದಿಗೆ ನಾವು ಕೈಜೋಡಿಸುತ್ತೇವೆ. ಬೇಡಿಕೆ ಈಡೇರುವವರೆಗೂ ಸಂರಕ್ಷಿತ ಅರಣ್ಯ ಪ್ರದೇಶ ಘೊಷಣೆ ಕೈಬಿಡುವಂತೆ ಹೋರಾಟ ಸಮಿತಿ ಮುಖಂಡರು ಆಗ್ರಹಿಸಿದರು.
ಸಾಗುವಳಿ ಜಮೀನಿಗೆ ಹಕ್ಕುಪತ್ರ ಕೊಡಿ: ಮುಳ್ಳಯ್ಯನಗಿರಿ ಭಾಗದಲ್ಲಿ ಇನ್ನುಮುಂದೆ ಅರ್ಜಿ ಸಲ್ಲಿಸುವವರಿಗೆ ಭೂಮಿ ಕೊಡಿ ಎಂಬುದು ನಮ್ಮ ಬೇಡಿಕೆಯಲ್ಲ. ಆದರೆ ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಿ ಸಾಗುವಳಿ ಮಾಡುತ್ತಿರುವ ಜಮೀನು, ಶಾಲೆ, ಗೋಮಾಳ ಜಾಗ ಉಳಿಸಿಕೊಡಿ. ಅರಣ್ಯ ರಕ್ಷಿಸಿಕೊಂಡು ಹಲವು ದಶಕಗಳಿಂದ ಪರಿಸರದ ಜತೆ ಅವಿನಾಭಾವ ಸಂಬಂಧ ಹೊಂದಿರುವ ಜನರಿಗೆ ರಕ್ಷಣೆ ಕೊಡಬೇಕು ಎಂದು ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್ಕುಮಾರ್ ಒತ್ತಾಯಿಸಿದರು. ಪ್ರವಾಸೋದ್ಯಮ ಇಲಾಖೆ, ಗ್ರಾಪಂ ಮತ್ತು ಮೀಸಲು ಪ್ರದೇಶ ನಿರ್ವಹಿಸುವ ಇಲಾಖೆಗಳು ಜವಾಬ್ದಾರಿ ವಹಿಸಿ ಪ್ರವಾಸೋದ್ಯಮಕ್ಕೆ ಸೂಕ್ತ ಮೂಲ ಸೌಲಭ್ಯ ಕಲ್ಪಿಸಬೇಕು. ಸ್ವಚ್ಛತೆ ಹೆಸರಲ್ಲಿ ಪ್ರವಾಸಿಗರಿಂದ ಚೆಕ್ಪೋಸ್ಟ್ಗಳಲ್ಲಿ ಹಣ ಪಡೆಯುತ್ತೀರಿ ಎಂದಮೇಲೆ ಗಿರಿಶ್ರೇಣಿಯಲ್ಲಿ ಸ್ವಚ್ಛತೆ ಕಾಪಾಡಬೇಕಾದುದು ನಿಮ್ಮ ಕರ್ತವ್ಯ. ಜಿಪಂ, ತಾಪಂ ಸದಸ್ಯರು, ಜಿಲ್ಲಾಡಳಿತ, ಪರಿಸರವಾದಿಗಳು ತಿಂಗಳಿಗೊಮ್ಮೆ ಬಂದು ಸಭೆ ನಡೆಸಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿ. ನಿರ್ವಹಣೆ ಸಾಧ್ಯವಾಗದಿದ್ದರೆ ಗ್ರಾಪಂಗಳಿಗೆ ವಹಿಸಿ. ನಮ್ಮ ಮನೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಮಾಡುತ್ತಿರುವ ಹೋರಾಟದಲ್ಲಿ ಪಕ್ಷ ರಾಜಕಾರಣ ಬೆರೆಸಬಾರದು. ರಾಜಕಾರಣಿಗಳನ್ನು ಎದುರಿಸುವ ಹೋರಾಟವಾಗಬೇಕು ಎಂದು ಸಲಹೆ ನೀಡಿದರು.
ಸಂಚಾಲಕ ರಘು, ಕೊಳಗಾವೆ ನಂಜುಂಡೇಗೌಡ, ರವಿ, ಬಿಸಗ್ನಿಮಠ ಶಾಂತಕುಮಾರ್, ಕೇಶವಯ್ಯ, ಸುರೇಶ್ ಪಂಡರವಳ್ಳಿ, ಬಸವರಾಜು ಉಕ್ಕುಡ, ಮುನ್ನಾ ವೇದಿಕೆಯಲ್ಲಿದ್ದರು.