

ವಿಜಯಪುರ: ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಪಟೇಲರು ಕಂಡಿದ್ದ ಕನಸು ಮತ್ತು ಅದಕ್ಕಾಗಿ ಅವರ ಪಟ್ಟ ಶ್ರಮವನ್ನು ಗುರುತಿಸಿ ಕೇಂದ್ರ ಸರ್ಕಾರ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸ ಎಂದು ಜಾರಿಗೆ ತಂದಿದೆ ಎಂದು ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಬಿರಾದಾರ ಹೇಳಿದರು.
ನಗರದ ಶಾಂತಿನಿಕೇತನ ಸಿಬಿಎಸ್‌ಇ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡ ರಾಷ್ಟ್ರೀಯ ಏಕತಾ ದಿವಸದಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿದರು.
ಭಾರತದ ಸ್ವಾತಂತ್ರ ಚಳವಳಿ ಮತ್ತು ಭಾರತದ ಏಕೀಕರಣಕ್ಕೆ ಸರ್ದಾರ್ ವಲ್ಲಭ ಭಾಯಿ ಪಟೇಲರು ಸಾಕಷ್ಟು ಶ್ರಮಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಪಟೇಲರು ಈ ದೇಶ ಕಂಡ ಮೊದಲ ಉಪ ಪ್ರಧಾನಿ ಹಾಗೂ ಮೊದಲ ಗೃಹ ಸಚಿವ ಆಗಿದ್ದರು ಎಂದು ಸ್ಮರಿಸಿದರು.
ಇದೇ ವೇಳೆ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಶಾಂತಿನಿಕೇತನ ಅಂತಾರಾಷ್ಟ್ರೀಯ ಶಾಲೆಯವರೆಗೆ ಏಕತೆಗಾಗಿ ಮ್ಯಾರಾಥಾನ್ ಆಯೋಜಿಸಲಾಗಿತ್ತು. 150 ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.
ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲ ರೀಜೇಶ ಪಿ.ಎನ್, ಭರತ್ ಬಿರಾದಾರ, ಶಾಲೆಯ ಶೈಕ್ಷಣಿಕ ಕಾರ್ಯ ಸಂಯೋಜಕಿ ಕಮರ ಾರಾ ಹಾಗೂ ಶಾಲೆಯ ಎಲ್ಲ ಬೋಧಕ ವರ್ಗದವರು ಉಪಸ್ಥಿತರಿದ್ದರು.