ರಸ್ತೆ ಗುಂಡಿಗಳಿಗೆ ಮಣ್ಣು ಹಾಕಿ ತೇಪೆ

Patched the road potholes with soil
Published on

ಶಿಗ್ಗಾಂವಿ: ಕಳೆದ ಎರಡು ವರ್ಷಗಳಿಂದ ಪಟ್ಟಣ ಹಾಗೂ ತಾಲೂಕಿನ ರಸ್ತೆಗಳು ಹದಗೆಟ್ಟು ಗುಂಡಿ ಬಿದ್ದಿದ್ದು, ವಾಹನಗಳ ಸಂಚಾರ ದುಸ್ತರವಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಶಿಗ್ಗಾಂವಿ ಪಟ್ಟಣಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯ ಸರ್ವಿಸ್ ರಸ್ತೆಗಳಲ್ಲಿನ ಡಾಂಬರು ಕಿತ್ತು, ಆಳವಾದ ಕಂದಕಗಳು ಸೃಷ್ಟಿಯಾಗಿವೆ. ಪಟ್ಟಣದ ಪ್ರವಾಸಿ ಮಂದಿರದ ಬಳಿ, ತಹಸೀಲ್ದಾರ್ ಕಾರ್ಯಾಲಯ ಸಂರ್ಪಸುವ ಸರ್ವಿಸ್ ರಸ್ತೆಗಳು ಮತ್ತು ಹೊಸ ಬಸ್ ನಿಲ್ದಾಣದ ಎದುರು, ಗಂಗೇಬಾವಿ ಕ್ರಾಸ್ ಬಳಿಯಿರುವ ಸರ್ವಿಸ್ ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳು ನಿರ್ವಣವಾಗಿ, ಇಲ್ಲಿ ನಿತ್ಯವೂ ಒಂದಾದರೂ ವಾಹನ ಅಪಘಾತ ಸಂಭವಿಸುತ್ತಲೇ ಇರುತ್ತವೆ. ಕಾಟಾಚಾರಕ್ಕೆ ಎಂಬಂತೆ ಸರ್ವಿಸ್ ರಸ್ತೆಗಳಲ್ಲಿನ ಗುಂಡಿಗಳಿಗೆ ಮಣ್ಣು ಹಾಕಿ ತೇಪೆ ಹಾಕಲಾಗುತ್ತಿದೆ. ಪೂರ್ಣ ಪ್ರಮಾಣದ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ.

ಹದಗೆಟ್ಟ ರಸ್ತೆಗಳು: ತಾಲೂಕಿನಲ್ಲಿ ಪ್ರಮುಖವಾಗಿ ಕಬನೂರ, ಬೆಂಡಿಗೇರಿ, ಹಿರೇಮಲ್ಲೂರನಿಂದ ಬನ್ನಿಕೊಪ್ಪದ ರಸ್ತೆ, ಶ್ಯಾಡಂಬಿ, ಕುನ್ನೂರ, ತಡಸ ರಸ್ತೆ, ಶೀಲವಂತಸೋಮಪುರ, ಮಡ್ಲಿ ಗ್ರಾಮದ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿನ ರಸ್ತೆಗಳು ಹದಗೆಟ್ಟು ಸಂಚಾರ ದುಸ್ತರವಾಗಿದೆ.

ಗಂಗೇಬಾವಿಯ ದೇವಸ್ಥಾನದ ಮುಂದಿನ ರಸ್ತೆ ಕೆಎಸ್​ಆರ್​ಪಿ 10ನೇ ಪಡೆ, ಯತ್ತಿನಹಳ್ಳಿ, ದುಂಡಶಿ ಮಾರ್ಗ ಮೂಲಕ ಮಲೆನಾಡು ಹಳ್ಳಿಗಳ ಸಂರ್ಪಸುವ ರಸ್ತೆ ಇದಾಗಿದೆ. ಕಳೆದ ತಿಂಗಳು ರಸ್ತೆ ಗುಂಡಿಯಲ್ಲಿ ಬೈಕ್ ಸವಾರ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಅನಾಹುತಗಳಾದರೂ ಸಂಬಂಧಿಸಿದವರು ರಸ್ತೆ ಗುಂಡಿ ಮುಚ್ಚಲು ಮುಂದಾಗುತ್ತಿಲ್ಲ ಎನ್ನುತ್ತಾರೆ ಈ ಭಾಗದ ಜನರು.

ರಸ್ತೆಯಲ್ಲಿ ಸಂಚಾರ ಮಾಡದ ಸ್ಥಿತಿಗೆ ತಲುಪಿದ್ದೇವೆ. ಮಳೆ ಬಂದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಪ್ರತಿದಿನ ಸಾಕಷ್ಟು ಅವಘಡಗಳಾಗುತ್ತಿವೆ ತಿಂಗಳ ಹಿಂದೆ ಗಂಗೇಬಾವಿಯ ರಸ್ತೆಯ ಗುಂಡಿಯಲ್ಲಿ ನನ್ನ ಸಂಬಂಧಿ ಕಳೆದುಕೊಂಡಿದ್ದೇನೆ. ಇದಕ್ಕೆ ಯಾರು ಹೊಣೆಗಾರರು. ಅಭಿವೃದ್ಧಿಗೆ ಗಮನ ಕೊಡದ ಸರ್ಕಾರ ಜನರ ಜೀವನದ ಜತೆಗೆ ಚೆಲ್ಲಾಟವಾಡುತ್ತಿದೆ. | ಪಿ.ಎಸ್. ಯಲಿಗಾರ, ಶಿಗ್ಗಾಂವಿ ಪಟ್ಟಣದ ನಾಗರಿಕ ಹುನಗುಂದ, ಸಿಂಗಾಪುರ, ಮುಗಳಿಕಟ್ಟಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳ ರಸ್ತೆಗಳು ಹಲವು ತಿರುವುಗಳಿಂದ ಕೂಡಿವೆ. ಮಲೆನಾಡು ಭಾಗವಾಗಿರುವುದರಿಂದ ಅತಿಯಾದ ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆ ಹದಗೆಟ್ಟಿರುವುದರಿಂದ ಬಸ್​ಗಳು ಬಾರದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅಧಿಕಾರಿಗಳು, ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ್ದರಿಂದ ಸ್ವಂತ ಖರ್ಚಿನಿಂದ ಆಳವಾದ ಗುಂಡಿಗಳಿಗೆ ಕಲ್ಲು, ಮಣ್ಣು ಹಾಕಿದ್ದೇನೆ. | ನಾಗರಾಜ ಮೂಲಿಮನಿ, ಹುನಗುಂದ ಗ್ರಾಪಂ ಉಪಾಧ್ಯಕ್ಷ ಗ್ಯಾರಂಟಿಗಳನ್ನು ನಿಭಾಯಿಸುವುದರಲ್ಲಿ ಸರ್ಕಾರ ಹೈರಾಣಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟು ಜನರ ಜೀವನಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ರಸ್ತೆಗಳ ದುರಸ್ತಿಯಾಗದಿರುವುದು ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಕೂಡಲೇ ಮುಂದಾಗಬೇಕು. | ಶಿವಾನಂದ ಮ್ಯಾಗೇರಿ, ವಾಕರಸಾ ಸಂಸ್ಥೆ ಮಾಜಿ ಉಪಾಧ್ಯಕ್ಷ ಮುಖ್ಯಮಂತ್ರಿಗಳ ವಿಶೇಷ ಪ್ರಗತಿ ಪಥ ಯೋಜನೆಯಡಿ ತಾಲೂಕಿನಲ್ಲಿ ಹದಗೆಟ್ಟ ರಸ್ತೆಗಳ ಸರ್ವೆ ನಡೆಸಿ, ಶೀಘ್ರದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಸಲಾಗುವುದು. | ಯಾಸೀರಖಾನ್ ಪಠಾಣ, ಶಾಸಕ ಶಿಗ್ಗಾಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net