

ಪುತ್ತೂರು: ದಿನಕ್ಕೆ ಎರಡರಿಂದ ಮೂರು ಬಾರಿ ಮಾತ್ರ ಆಹಾರ ಸೇವನೆ ಮಾಡಿದರೆ, ಆರೋಗ್ಯದಿಂದ ಇರಬಹುದು ಎಂದು ಪುತ್ತೂರು ಪತಂಜಲಿ ಯೋಗ ಸಮಿತಿ ತಾಲೂಕು ನಿಕಟಪೂರ್ವ ಪ್ರಭಾರಿ ಟಿ.ಆರ್. ಸುಬ್ರಹ್ಮಣ್ಯ ರಾವ್ ಅಭಿಪ್ರಾಯಪಟ್ಟರು.
ಪುತ್ತೂರು ಪತಂಜಲಿ ಯೋಗ ಸಮಿತಿ ನೇತೃತ್ವ ಹಾಗೂ ವಿಜಯವಾಣಿ ಸಹಯೋಗದಲ್ಲಿ ಹಾರಾಡಿಯ ಪತಂಜಲಿ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ೧೦ನೇ ವರ್ಷದ ಯೋಗ ದಿನಾಚರಣೆಯಲ್ಲಿ ಶುಕ್ರವಾರ ಅವರು ಮಾತನಾಡಿದರು.
ಮನುಷ್ಯನನ್ನು ಬೆಳಗ್ಗೆ ವಾತ, ಮಧ್ಯಾಹ್ನ ಪಿತ್ಥ, ರಾತ್ರಿ ಕಫ ಕಾಡುತ್ತದೆ. ಇದರ ಸಮತೋಲನಕ್ಕೆ ಬೆಳಗ್ಗೆ ಕುಳಿತು ನೀರು ಕುಡಿಯಬೇಕು, ಮಧ್ಯಾಹ್ನ ಮಜ್ಜಿಗೆ, ರಾತ್ರಿ ಹಾಲಿಗೆ ಅರಶಿಣ ಹುಡಿ ಹಾಕಿ ಕುಡಿಯಬೇಕು ಎಂದರು.
ಅಂಬಿಕಾ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ರಾಮಚಂದ್ರ ಭಟ್ ಮಾತನಾಡಿ, ಬ್ರಾಹ್ಮೀ ಮುಹೂರ್ತದಲ್ಲಿ ಮಾಡುವ ಯೋಗಕ್ಕೆ ವಿಶೇಷ ಶಕ್ತಿಯಿದೆ ಎಂದರು.
ಯೋಗ ಶಿಕ್ಷಕ ಡಾ.ಶ್ರೀಕೃಷ್ಣ ಭಟ್, ಪ್ರಸನ್ನ ಕುಮಾರ್ ಯೋಗ ತರಗತಿ ನಡೆಸಿದರು. ಬಾಲಸುಬ್ರಹ್ಮಣ್ಯ, ಟಿ.ಎಸ್.ರಾವ್ ಯೋಗದ ಪ್ರಯೋಜನಗಳನ್ನು ವಿವರಿಸಿದರು. ೩೦ಕ್ಕೂ ಅಽಕ ಮಂದಿ ಭಾಗವಹಿಸಿದ್ದರು.
ಪ್ರತಿನಿತ್ಯ ಬೊಳುವಾರು ಹಾಗೂ ಹಾರಾಡಿಯಲ್ಲಿ ಉಚಿತವಾಗಿ ಯೋಗ ತರಗತಿಗಳು ನಡೆಯುತ್ತಿವೆ. ಬೆಳಗ್ಗೆ ೫.೩೦ರಿಂದ ೬.೪೫ ಹಾಗೂ ಸಂಜೆ ೫ರಿಂದ ೬.೩೦ ಯೋಗ ತರಗತಿಗಳು ನಡೆಸಲಾಗುತ್ತಿದ್ದು, ಆಸಕ್ತರು ಪ್ರಯೋಜನ ಪಡೆಯಬಹುದು.
ಭುಜಂಗಾಸನ, ತಡಾಸನ, ವೃಶ್ಚಿಕಾಸನ, ವಕ್ರಾಸನ, ಅರ್ಧಚಂದ್ರಾಸನ, ತ್ರಿಕೋನಾಸನ, ಗೋಮುಖಾಸನ, ಸೂರ್ಯ ನಮಸ್ಕಾರ ಸಹಿತ ವಿವಿಧ ಆಸನಗಳನ್ನು ಹೇಳಿಕೊಡಲಾಯಿತು.
ಯೋಗದಲ್ಲಿ ನಿರಂತರವಾಗಿ ಭಾಗವಹಿಸುವ ಈಶ್ವರ, ಕುಸುಮಾ ಗೋಪಾಲ್, ಮಧುಮಿತ, ಇಂದಿರಾ, ಅನಿತಾ, ಮೀನಾಕ್ಷಿ, ಸಂದ್ಯಾ, ಲೂಸಿ, ಗಿರಿಜಾ ಮತ್ತಿತರರು ಹಾಜರಿದ್ದರು.