

ಉಡುಪಿ: ದೇಶದ ಪ್ರತೀ ಗ್ರಾಮಗಳಲ್ಲಿ ಯೋಗವನ್ನು ಪಸರಿಸಿ ಜನರ ಸೇವೆ ಮಾಡುವುದು ಬಾಬಾ ರಾಮದೇವ್ ಅವರ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲಿ ಮೊಬೈಲ್ ವಾಹನದ ಮೂಲಕ ಪ್ರತೀ ಹಳ್ಳಿಗೆ ತೆರಳಿ ಜನ ಜಾಗೃತಿ ಮೂಡಿಸಲಾಗುವುದು ಎಂದು ಪತಂಜಲಿ ಕರ್ನಾಟಕ ರಾಜ್ಯ ಮಹಿಳಾ ಪ್ರಭಾರಿ ಸುಜಾತಾ ಮಾರ್ಲಾ ಹೇಳಿದರು.
ಭಾನುವಾರ ಇಂದ್ರಾಳಿ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ನಡೆದ ಯೋಗ ಮಿಲನ-2022 ಕಾರ್ಯಕ್ರಮದಲ್ಲಿ ಸಾಧಕರಿಗೆ ಪತಂಜಲಿ ಯೋಗ ವಾರಿಯರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಮೊಬೈಲ್ ವಾಹನದಲ್ಲಿ ಓರ್ವ ನ್ಯಾಚುರೋಪತಿ ವೈದ್ಯರು, ಸಿಬ್ಬಂದಿ, 4 ಮಂದಿ ಕಾರ್ಯಕರ್ತರು ಹಾಗೂ ಲ್ಯಾಬ್ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.
ಸಹ ರಾಜ್ಯ ಪ್ರಭಾರಿ ಡಾ. ಜ್ಞಾನೇಶ್ವರ್ ನಾಯಕ್, ಮಂಡಲ ಪ್ರಭಾರಿ ರಾಘವೇಂದ್ರ ರಾವ್, ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ, ಕರಂಬಳ್ಳಿ ಶಿವರಾಮ ಶೆಟ್ಟಿ, ಅಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.