

ಬೆಂಗಳೂರು: ಜಯನಗರದ ಕನಕನಪಾಳ್ಯದಲ್ಲಿ ಪ್ರಸಿದ್ಧ ಪಟಾಲಮ್ಮದೇವಿ ದೇವಾಲಯದ ರಥೋತ್ಸವ, ಹೂವಿನ ಪಲ್ಲಕ್ಕಿ ಉತ್ಸವ, ಅಗ್ನಿ ಕೊಂಡೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಬುಧವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಗರೀಕರಣ ಭರಾಟೆಯಲ್ಲಿಯೂ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ದೇವರ ಉತ್ಸವ, ರಥೋತ್ಸವ, ಊರಹಬ್ಬ, ಜಾನಪದ ಉತ್ಸವಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರಲಾಗುತ್ತಿದೆ. ಆ ಮೂಲಕ ಮೂಲ ಸಂಸ್ಕೃತಿ, ಧಾರ್ಮಿಕ ಪರಂಪರೆ ಉಳಿಸುವ ಕಾರ್ಯ ಮುಂದುವರಿಸಲಾಗಿದೆ. ಗ್ರಾಮದ ಕೆ.ಎಂ. ನಾಗರಾಜ್ ನೇತೃತ್ವದಲ್ಲಿ ವಿಜೃಂಭಣೆಯಿಂದ ಉತ್ಸವ ಆಚರಿಸುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ. ನಾಗರಾಜ್ ಮಾತನಾಡಿ, ಎಲ್ಲ ಗ್ರಾಮಗಳ ಹಿರಿಯರು, ಮುಖ್ಯಸ್ಥರು, ಟ್ರಸ್ಟ್‌ನ ಪದಾಧಿಕಾರಿಗಳ ಜೊತೆಗೂಡಿ ಮೂರು ವರ್ಷಕ್ಕೊಮ್ಮೆ ಬರುವ ಈ ದೇವರ ಉತ್ಸವದಲ್ಲಿ ಧಾರ್ಮಿಕ, ಜಾನಪದ, ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ದೀಪದಾರತಿ:
ಉತ್ಸವದಲ್ಲಿ 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ದೀಪದಾರತಿ, ಬೆಲ್ಲ ಮತ್ತು ತಂಬಿಟ್ಟಿನ ಆರತಿ ಹೊತ್ತು ರಥೋತ್ಸವದೊಂದಿಗೆ ಸಾಗಿದರು. ಪೂಜಾ ಕುಣಿತ, ಪಟ ಕುಣಿತ, ಡೊಳ್ಳು ಕುಣಿತ ಸೇರಿ 25ಕ್ಕೂ ಹೆಚ್ಚು ಜಾನಪದ ತಂಡಗಳು ಕಲಾ ಪ್ರದರ್ಶನ ನೀಡಿದವು. ವಾದ್ಯಗಳಿಗೆ ಹೆಜ್ಜೆಹಾಕುವ ಮೂಲಕ ಸ್ಥಳೀಯ ಯುವಜನರು ಉತ್ಸವದಲ್ಲಿ ಸಂಭ್ರಮಿಸಿದರು. ಕ್ಷೇತ್ರದಲ್ಲಿನ ಎಲ್ಲ ದೇವಾಲಯಗಳೂ ಸೇರಿ ರಾಜಬೀದಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಮೂರು ದಿನಗಳ ಕಾಲ ಉತ್ಸವ ನಡೆಯಲಿದ್ದು, ಮೈಸೂರು ದಸಾರ ರೀತಿಯ ವಾತಾವರಣ ಸೃಷ್ಟಿಯಾಗಿದೆ.
ಸಚಿವರಾದ ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ಪಟಾಲಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೆ.ಎಂ. ನಾಗರಾಜ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮುಖ್ಯ ಸಚೇತಕ ಅಶೋಕ್ ಎಂ. ಪಟ್ಟಣ, ಶಾಸಕ ಉದಯ ಗರುಡಾಚಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಮಾಜಿ ಶಾಸಕರಾದ ಕೆ. ಚಂದ್ರಶೇಖರ್, ಹೇಮಚಂದ್ರ ಸಾಗರ್, ಪ್ರೇಮಚಂದ್ರ ಸಾಗರ್, ಪಿ.ಆರ್. ರಮೇಶ್, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್ ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು, ಕನಕನಪಾಳ್ಯ, ಸಿದ್ದಾಪುರ, ಬೈರಸಂದ್ರ, ನಾಗಸಂದ್ರ, ಯಡಿಯೂರಪ್ಪ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.