

ಶಿವಮೊಗ್ಗ: ಪಾದ್ರಿ ಫ್ರಾನ್ಸಿಸ್ ಫರ್ನಾಂಡೀಸ್ ಅಪ್ರಾಪ್ತೆ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಖಂಡಿಸಿ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘ, ಜಿಲ್ಲಾ ಬಂಜಾರ ಸಂಘ, ವಿಶ್ವ ಹಿಂದು ಪರಿಷತ್, ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸೈನ್ಸ್ ಮೈದಾನದಿಂದ ಕಾನ್ವೆಂಟ್ ರಸ್ತೆ, ಡಿವಿಎಸ್ ಸರ್ಕಲ್ ಮೂಲಕ ಮಹಾವೀರ ವೃತ್ತ ತಲುಪಿದ ಪ್ರತಿಭಟನಾ ಮೆರವಣಿಗೆ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪಾದ್ರಿಯ ಕೃತ್ಯವನ್ನು ಖಂಡಿಸಿತು. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಘಟನೆ ಬಳಿಕ ಅಪ್ರಾಪ್ತೆ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಗೆ ನ್ಯಾಯ ಕೊಡಿಸಬೇಕಿದೆ. ಈ ಹಿಂದೆಯೂ ಚರ್ಚ್‌ನಲ್ಲಿ ಸಾಕಷ್ಟು ಪ್ರಕರಣಗಳು ನಡೆದಿದ್ದು ಬೆಳಕಿಗೆ ಬಂದಿಲ್ಲ. ಚರ್ಚ್ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯ ಮಾನ್ಯತೆಯನ್ನು ರದ್ದು ಮಾಡಿ ಅಲ್ಲಿನ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಂಜಾರ ಸಂಘದ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಮಾತನಾಡಿ, ಹಿಂದುಳಿದ ವರ್ಗದ ವಿದ್ಯಾರ್ಥಿನಿಯ ಮೇಲೆ ಪಾದ್ರಿ ಅತ್ಯಾಚಾರವೆಸಗಿದ್ದು ಸಮಗ್ರವಾಗಿ ಪ್ರಕರಣದ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ವಿದ್ಯಾಸಂಸ್ಥೆಯನ್ನು ಸರ್ಕಾರ ಸುಪರ್ದಿಗೆ ತೆಗೆದುಕೊಳ್ಳಬೇಕು. ಪ್ರಕರಣವನ್ನು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿ ಸಂಘಟನೆ ರಾಜ್ಯಾಧ್ಯಕ್ಷ ಡಿ.ಆರ್.ಗಿರೀಶ್, ಬಂಜಾರ ಜಿಲ್ಲಾ ಸಂಘದ ಕಾರ್ಯದರ್ಶಿ ಆರ್.ಜಗದೀಶ್, ಪಾಲಿಕೆ ಸದಸ್ಯ ಆರ್.ಸಿ.ನಾಯ್ಕ, ಚಂಪಾ, ಉಮಾಮಹೇಶ್ವರ ನಾಯ್ಕ, ನಾನ್ಯಾ ನಾಯ್ಕ, ಕಲ್ಲೇಶ್ ನಾಯ್ಕ, ಮಂಜುನಾಯ್ಕ, ಕೃಷ್ಣನಾಯ್ಕ, ಧನಲಕ್ಷ್ಮೀ ಬಾಯಿ, ಭೋಜ್ಯ ನಾಯ್ಕ, ಹಿಂದು ಸಂಘಟನೆಯ ಜೆ.ಆರ್.ವಾಸುದೇವ್, ರಾಜೇಶ್‌ಗೌಡ, ಸುರೇಶ್ ಬಾಬು ಇತರರು ಪಾಲ್ಗೊಂಡಿದ್ದರು.