

ಬೆಂಗಳೂರು: ಪ್ರತಿ ಲೋಕಸಭಾ ಕ್ಷೇತ್ರಕ್ಕೊಂದು ಪಾಸ್ ಪೋರ್ಟ್ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಾಸ್ಪೋರ್ಟ್ ಸೇವೆಗಳು, ಕಾನೂನಾತ್ಮಕ ವಲಸೆ ವಿಚಾರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿದೇಶಕ್ಕೆ ವಿವಿಧ ಕಾರಣಗಳಿಗಾಗಿ ತೆರಳುವ ಭಾರತೀಯರಿಗೆ ಅನುಕೂಲ ವಾಗುವಂತೆ ಇರುವ ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯ ಸರ್ಕಾರಗಳ ಸಹಯೋಗ ಅಗತ್ಯ ಎಂದರು.
ಪ್ರಸ್ತುತ ವೀಸಾಕ್ಕೆ ಸಂಬಂಧಿಸಿದಂತೆ 170 ದೇಶಗಳೊಂದಿಗೆ ಈ-ವೀಸಾ ಸೇವೆ ಆರಂಭಿಸಲಾಗಿದೆ. ಇದರಿಂದ ಭಾರತಕ್ಕೆ ಆಗಮಿಸುವ ವಿದೇಶಿಗರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಪಾಸ್ಪೋರ್ಟ್ ವ್ಯವಸ್ಥೆ ಸರಳೀಕರಿಸಲು ವಿದೇಶಾಂಗ ಸಚಿವಾಲಯ ಮೊಬೈಲ್ ಆಪ್ ಹೊರತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಭಾರತೀಯರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಾಲ್ಸೆಂಟರ್ ತೆರೆದಿದೆ. ಹಾಗೆಯೇ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಅಲ್ಲಿನ ಭಾರತದ ರಾಯಭಾರಿ ಕಚೇರಿಗಳಲ್ಲಿ ತಮ್ಮ ವಿವರ ನೋಂದಾಯಿಸುವ ಜವಾಬ್ದಾರಿ ಮರೆಯಬಾರದು ಎಂದರು.
ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ಕರ್ನಾಟಕದವರು ಅಮೆರಿಕದ ವೀಸಾ ಪಡೆಯಲು ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಗೆ ಅಲೆದಾಡಬೇಕಾಗಿದೆ. ಬೆಂಗಳೂರಿನಲ್ಲಿಯೇ ವೀಸಾ ಕಚೇರಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರನ್ನು ಒತ್ತಾಯಿಸಿದರು.
ಭಾರತೀಯರು ವಿದೇಶದಲ್ಲಿ ಮರಣ ಹೊಂದಿದಾಗ ಅವರ ಶವವನ್ನು ತಾಯ್ನಾಡಿಗೆ ತರುವುದು ಕಷ್ಟದ ಕೆಲಸವಾಗಿದೆ. ಈ ಬಗ್ಗೆ ವಿದೇಶಗಳೊಂದಿಗೆ ರ್ಚಚಿಸಿ ನಿಯಮ ಸರಳೀಕರಿಸಬೇಕು ಮತ್ತು ಉನ್ನತ ಶಿಕ್ಷಣಕ್ಕಾಗಿ ತೆರಳುವ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅನೇಕ ಸಮಸ್ಯೆಗಳಿದ್ದು ಕೇಂದ್ರ ಗಮನಹರಿಸಬೇಕು. ಎರಡನೇ ದರ್ಜೆ ಪ್ರಜೆಯಾಗಿ ಪರಿಗಣನೆಯಾಗಬಾರದು ಎಂದರು.
ಪಾಸ್ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿರುವವರ ಪರಿಶೀಲನೆ ನಡೆಸಿ ವರದಿ ನೀಡಲು ಈ ಹಿಂದೆ ಪೊಲೀಸ್ ಇಲಾಖೆಗೆ ಕನಿಷ್ಠ 30 ದಿನ ಬೇಕಾಗಿತ್ತು, ಆನ್ಲೈನ್ ವ್ಯವಸ್ಥೆ ಬಳಿಕ ಕೇವಲ 8-10 ದಿನಗಳಲ್ಲಿ ಪರಿಶೀಲನೆ ಪೂರ್ಣಗೊಳ್ಳುತ್ತಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಿಳಿಸಿದರು.