

ಧಾರವಾಡ: ಜನ ಓದಬೇಕು, ಓದಿದ್ದನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ಕಟ್ಟಿ ಕೊಡುವುದೇ ಸಾಹಿತ್ಯ. ಜೀವನಕ್ಕೆ ಸಾಹಿತ್ಯವು ಉತ್ಸಾಹವನ್ನು ತುಂಬುತ್ತದೆ ಎಂದು ಹಾರೋಗೇರಿಯ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎಸ್. ಮಾಳಿ ಹೇಳಿದರು.
ಸೋಮವಾರ ಕರ್ನಾಟಕ ವಿದ್ಯಾವರ್ಧಕ ಸಂಘದ ‘ಸಾಹಿತ್ಯ ಮತ್ತು ಅನುಭಾವ ಮಂಟಪ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದುಡಿಮೆಯ ತುಡಿತ ಎಚ್ಚರಿಸುವ ಕಾಯಕ ಮಾಡಿದವ ಶರಣ ಅಲ್ಲಮಪ್ರಭು. ಕಾವ್ಯಗಳ ಮೂಲಕ ಜಾರಿ ಬಿದ್ದವರನ್ನು ಎದ್ದು ನಿಲ್ಲಿಸಿದವರು ಜೈನ ಕವಿಗಳಾದರೆ, ಹೊರಗಿನವರನ್ನು ಎದೆಯೊಳಗೆ ಅಪ್ಪಿಕೊಂಡವರು ವಚನಕಾರರು. ಭೋಗದ ಬದುಕಿಗೆ ಕಡಿವಾಣ ಹಾಕಿದವರು ದಾಸರು, ಬದುಕಿಗೆ ಅಧ್ಯಾತ್ಮದ ಹೆಪ್ಪು ಹಾಕಿ ಹೊಸ ಪರಂಪರೆಗೆ ನಾಂದಿ ಹಾಡಿದವರು ತತ್ವಪದಕಾರರು. ಕರ್ನಾಟಕ ವಿದ್ಯಾವರ್ಧಕ ಸಂಘ ತೆರೆಮರೆಯಲ್ಲಿರುವ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ, ಬೆನ್ನು ತಟ್ಟಿ ಬೆಳೆಸುವ ಕಾರ್ಯ ನಿರಂತರವಾಗಿ ಮಾಡುತ್ತ ಬಂದಿದೆ. ಇವತ್ತಿನ ಕೃತಿಯ ಕರ್ತೃ ರಾಜಶೇಖರ ಕುರಿಯವರ ಅದ್ಭುತ ಪ್ರತಿಭೆಯಾಗಿದ್ದು ಅವರನ್ನು ಬೆಳಕಿಗೆ ತಂದದ್ದು ಶ್ಲಾಘನೀಯ ಎಂದರು.
ರಾಜಶೇಖರ ಕುರಿಯವರ ‘ಅಮೃತ ಸಿಂಚನ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸರಸ್ವತಿ ಭೋಸಲೆ, ಮೃದು ಧೋರಣೆಯ ಬರವಣಿಗೆ ಮೂಲಕ ಸಾಮಾಜಿಕ ಜಾಗೃತಿಯನ್ನು ಅವರ ಲೇಖನಗಳು ಒಳಗೊಂಡಿವೆ. ಇನ್ನಷ್ಟು ಕೃತಿಗಳು ಇವರಿಂದ ಹೊರಬರಲಿ ಎಂದರು.
ಸಾಹಿತ್ಯ ಮತ್ತು ಅನುಭಾವ ಮಂಟಪದ ಸಂಚಾಲಕ ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಡಾ.ಚಂದ್ರಶೇಖರ ರೊಟ್ಟಿಗವಾಡ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ ಕುರಿಯವರ, ಡಾ.ವೈ.ಎಂ. ಭಜಂತ್ರಿ, ಎಸ್.ಎಚ್. ಪ್ರತಾಪ, ಸತೀಶ ತುರುಮರಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಸುಜಾತಾ ಹಡಗಲಿ, ಸುಲೋಚನಾ ಮಾಲಿಪಾಟೀಲ ಇತರರಿದ್ದರು. ಡಾ.ಆರ್.ಎ.ಬಾಳಿಕಾಯಿ ಸ್ವಾಗತಿಸಿದರು. ಲಲಿತಾ ಪಾಟೀಲ ಪ್ರಾರ್ಥಿಸಿದರು. ಡಾ.ಗೋವಿಂದರಾಜ ತಳಕೋಡ ನಿರೂಪಿಸಿದರು. ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ್ ವಂದಿಸಿದರು.