

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ‘ಪಾಸಿಂಗ್ ಪ್ಯಾಕೇಜ್’ ಸೂತ್ರವನ್ನು ರೂಪಿಸಲಾಗಿದೆ.
ಶೈಕ್ಷಣಿಕ ಕಾಶಿ ಎನಿಸಿಕೊಂಡಿರುವ ಮೈಸೂರು ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿಂದೆ ಬಿದ್ದಿದೆ. ಐದಾರು ವರ್ಷಗಳಿಂದಲೂ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ನೀಡಿದೆ. ಇದು ಇಡೀ ಜಿಲ್ಲೆಗೆ ಮುಜುಗರ ಉಂಟುಮಾಡಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೈಸೂರು ಜಿಲ್ಲೆ ಅಗ್ರ 5 ಸ್ಥಾನದೊಳಗೆ ಬರಬೇಕು’ ಎಂದು ನಿರ್ದೇಶಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ತಂಡ ಫಲಿತಾಂಶ ಹೆಚ್ಚಳಕ್ಕೆ ಕಸರತ್ತು ನಡೆಸುತ್ತಿದೆ. ಅದಕ್ಕಾಗಿ ವಿವಿಧ ಚಟುವಟಿಕೆ, ಕಾರ್ಯಕ್ರಮ ಕೈಗೊಂಡು 10ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಉತ್ತೇಜನ ನೀಡುತ್ತಿದೆ.
2022-23ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಶೇ.89.75ರಷ್ಟಾಗಿತ್ತು. ರಾಜ್ಯಪಟ್ಟಿಯಲ್ಲಿ ಜಿಲ್ಲೆ 16ನೇ ಸ್ಥಾನ ಪಡೆದುಕೊಂಡಿತ್ತು. ಪಕ್ಕದ ಜಿಲ್ಲೆಗಳಾದ ಮಂಡ್ಯ 2ನೇ, ಹಾಸನ 3ನೇ, ಚಾಮರಾಜನಗರ 7ನೇ ಸ್ಥಾನ ಗಳಿಸಿದ್ದವು. ಅದಕ್ಕಿಂತ ಕಳಪೆ ಪ್ರದರ್ಶನವನ್ನು ಮೈಸೂರು ಜಿಲ್ಲೆ ನೀಡಿತ್ತು.
ಜಿಲ್ಲೆಗೆ 2019-20ನೇ ಸಾಲಿನಲ್ಲಿ ಶೇ.74.45ರಷ್ಟು ಫಲಿತಾಂಶ ಬಂದಿತ್ತು. 2020-21ನೇ ಸಾಲಿನಲ್ಲಿ ಕರೊನಾ ಕಾಲಕ್ಕೆ ಎಲ್ಲರನ್ನೂ ಪಾಸ್ ಮಾಡುವ ಮೂಲಕ ನೂರಕ್ಕೆ ನೂರರಷ್ಟು ಫಲಿತಾಂಶವಾಗಿತ್ತು. 2021-22ನೇ ಸಾಲಿನಲ್ಲಿ ಶೇ.91.38ರಷ್ಟಾಗಿತ್ತು. ಕಳೆದ ವರ್ಷ ಶೇ.95ರಷ್ಟು ಫಲಿತಾಂಶ ಗುರಿ ತಲುಪಲು ಜಿಲ್ಲೆ ವಿಫಲವಾಗಿತ್ತು. ರಿಸಲ್ಟ್ ಸುಧಾರಣೆಗೆ ಕೈಗೊಂಡ ಕಾರ್ಯಕ್ರಮಗಳೆಲ್ಲ ಫಲ ಕೊಟ್ಟಿರಲಿಲ್ಲ. ಹೀಗಾಗಿ, ಹಳೇ ತಪ್ಪುಗಳನ್ನು ಸುಧಾರಿಸಿಕೊಂಡು ಈ ಸಲ ರಿಸಲ್ಟ್ ವೃದ್ಧಿಗೆ ಶಿಕ್ಷಣ ಇಲಾಖೆ ಶ್ರಮ ಹಾಕುತ್ತಿದೆ.
ಈ ಸಲ ‘ಪಾಸಿಂಗ್ ಪ್ಯಾಕೇಜ್’ ಎಂಬ ಹೊಸ ಸೂತ್ರವನ್ನು ಅಳವಡಿಸಿಕೊಂಡಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಕನಿಷ್ಠ 40 ಅಂಕ ಪಡೆದುಕೊಂಡು ಉತ್ತೀರ್ಣವಾಗಬೇಕು. ಅದಕ್ಕೆ ಬೇಕಾಗುವಂತೆ ಪ್ರತಿ ವಿದ್ಯಾರ್ಥಿಯನ್ನೂ ಸಜ್ಜುಗೊಳಿಸಲಾಗುತ್ತಿದೆ. ಶಾಲೆಯಲ್ಲಿ 3 ಗುಂಪುಗಳಾಗಿ ವಿಂಗಡನೆ ಮಾಡಿದ್ದು, ವಿಷಯವಾರು ಕಲಿಕಾ ಚಟುವಟಿಕೆ ನೀಡಲಾಗಿದೆ.
ಕನಿಷ್ಠ 40 ಅಂಕ ಪಡೆಯುವ ಸಾಮರ್ಥ್ಯ ವೃದ್ಧಿಸುವ ಮೂಲಕ ಉತ್ತೀರ್ಣಗೊಳ್ಳುವಂತೆ ಮಾಡುವುದು ಪಾಸಿಂಗ್ ಪ್ಯಾಕೇಜ್‌ನ ಉದ್ದೇಶವಾಗಿದೆ. 1 ಅಂಕ ಪ್ರಶ್ನೆ, 2 ಅಂಕ ಪ್ರಶ್ನೆ, 3 ಅಂಕ ಪ್ರಶ್ನೆ, 4 ಅಂಕದ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು. ಅದರಲ್ಲಿ ಎಷ್ಟು ಅಂಕ ಪಡೆದುಕೊಳ್ಳಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಮಗು ಯಾವ ಅಂಕದ ಕ್ಷೇತ್ರದಲ್ಲಿ ಹಿಂದುಳಿದೆ ಎಂಬುದನ್ನು ಪತ್ತೆ ಹಚ್ಚಿ ಪಾಸಾಗುವಂತೆ ತರಬೇತಿ ನೀಡುವ ಕೆಲಸವನ್ನೂ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ಗುರುತಿಸಿದೆ. ತ್ರೈಮಾಸಿಕ, ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವ ಮಕ್ಕಳ ಮಾಹಿತಿ ಸಂಗ್ರಹಿಸಿದ್ದು, ಇವರು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗಿದೆ. ಕಲಿಕೆಯಲ್ಲಿ ಹಿನ್ನಡೆಯಾಗಲು ಕಾರಣವೇನು? ಅದಕ್ಕೆ ಏನು ಪರಿಹಾರ ಕಲ್ಪಿಸಬಹುದು ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ವಿದ್ಯಾರ್ಥಿಗಳಿಗೆ ತಕ್ಕಂತೆ ಪಾಠ ಮಾಡಲಾಗುತ್ತಿದೆ. ಈ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಬೇಕಾದ ಸಾಮರ್ಥ್ಯ ಬರುವಂತೆ ಬೋಧನೆ ಮಾಡಲೂ ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಗುರಿ ನೀಡಲಾಗಿದೆ.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರತಿ ತಾಲೂಕು ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಜಿಲ್ಲೆಯ ಶೈಕ್ಷಣಿಕ ವಲಯ ವಿಭಾಗದಲ್ಲಿ ಕಳೆದ ವರ್ಷ ಕೆ.ಆರ್.ನಗರ(ಶೇ.79.28) ಕೊನೆಯ ಸ್ಥಾನ ಪಡೆದಿತ್ತು. ಮೈಸೂರು ದಕ್ಷಿಣ(ಶೇ.87.05) ಮತ್ತು ಮೈಸೂರು ಉತ್ತರ ವಿಭಾಗ(82.80) ಫಲಿತಾಂಶವೂ ಶೇ.90ರಷ್ಟು ದಾಟಿರಲಿಲ್ಲ. ಈ ವಲಯಗಳಲ್ಲಿ ಫಲಿತಾಂಶ ವೃದ್ಧಿಗೆ ಹೆಚ್ಚಿನ ಶ್ರಮ ಹಾಕುವಂತೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಾಕಿತ್ತು ಮಾಡಲಾಗಿದೆ. ಉಳಿದ ವಲಯಗಳು ಕಳೆದ ಬಾರಿಗಿಂತ ಇನ್ನೂ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಸೂಚಿಸಲಾಗಿದೆ.
ವಿಷಯವಾರು ಬೋಧಕರಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ. ಸಂವಾದ ನಡೆಸುವ ಮೂಲಕ ಯಾವ ವಿಷಯದಲ್ಲಿ ವಿದ್ಯಾರ್ಥಿಗಳು ವಿಫಲರಾಗಿದ್ದಾರೆ ಎಂಬುದರ ಕುರಿತು ಚರ್ಚಿಸಲಾಗಿದೆ. ಜತೆಗೆ, ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಮೊಬೈಲ್ ಬಳಕೆಗೂ ಕಡಿವಾಣ ಹಾಕಲಾಗುತ್ತಿದ್ದು, ಇದರ ದುಷ್ಪರಿಣಾಮ ತಿಳಿಸಿಕೊಡುವ ಮೂಲಕ ಅರಿವು ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ.
ಪ್ರಥಮ ಶ್ರೇಣಿ, ಅತ್ತುನ್ನತ ಶ್ರೇಣಿ ಪಡೆಯುವ ನಿರೀಕ್ಷೆ ಇರುವ ವಿದ್ಯಾರ್ಥಿಗಳ ಮೇಲೂ ಹೆಚ್ಚಿನ ನಿಗಾ ಇಡಲಾಗಿದೆ. 600ಕ್ಕಿಂತ ಹೆಚ್ಚು ಅಂಕ ತೆಗೆಯುವ ಸಾಮರ್ಥ್ಯ ಇರುವ ಮಕ್ಕಳಿಗೆ ಪರೀಕ್ಷೆ ಹೇಗೆ ಬರೆಯಬೇಕು? ಉತ್ತರ ಹೇಗಿರಬೇಕು? ಬರವಣಿಗೆ ಕಡೆ ಹೆಚ್ಚು ಗಮನ ಹರಿಸಬೇಕು ಎಂಬಿತ್ಯಾದಿ ಅಂಶಗಳನ್ನು ತಿಳಿಸಿಕೊಡಲಾಗುತ್ತಿದೆ.
ಫಲಿತಾಂಶ ವೃದ್ಧಿಗೆ ವಿವಿಧ ಸೂತ್ರಗಳನ್ನೂ ಅಳವಡಿಸಿಕೊಂಡಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮಾಹಿತಿ ಕಲೆ ಹಾಕಿ ಅವರೆಡೆಗೆ ವಿಶೇಷ ಗಮನ, ಕೀಳರಿಮೆ- ಹಿಂಜರಿಕೆ ಹೊಂದಿರುವ ಮಕ್ಕಳಿಗೆ ಮನೋಸ್ಥೈರ್ಯ ತುಂಬುವುದು, ಮಗು ಯಾವ ವಿಷಯದಲ್ಲಿ ಹಿಂದುಳಿದಿದೆ ಎಂಬುದನ್ನು ಪತ್ತೆ ಹಚ್ಚಿ ಉತ್ತೀರ್ಣವಾಗಲು ತರಬೇತಿ, ಓದಿನೊಂದಿಗೆ ಬರೆದು ಅಭ್ಯಾಸಕ್ಕೆ ಉತ್ತೇಜನ, ಅನ್ಯ ಶಾಲೆಗಳ ಶಿಕ್ಷಕರನ್ನು ಕರೆಸಿ ಬೋಧನೆಗೆ ಅವಕಾಶ, ಪಾಲಕರ ಸಭೆ ನಡೆಸಿ ಮಕ್ಕಳ ಕಲಿಕೆಗೆ ಗಮನಹರಿಸುವಂತೆ ತಿಳಿಸಲಾಗುತ್ತಿದೆ. ಹೀಗೆ ಶಾಲಾ ಮುಖ್ಯಶಿಕ್ಷಕರು, ವಿಷಯ ಶಿಕ್ಷಕರಿಗೆ ನಿರ್ದಿಷ್ಟ ಕಾರ್ಯಸೂಚಿಯನ್ನು ಈ ಸಲ ನೀಡಲಾಗಿದೆ. ಆ ಪ್ರಕಾರ ಕಾರ್ಯೋನ್ಮುಖವಾಗಲು ಸೂಚಿಸಲಾಗಿದೆ.
ಈ ಸಲ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆ 5ನೇ ಸ್ಥಾನದ ಒಳಗೆ ಬರುವ ಗುರಿ ಹಾಕಿಕೊಳ್ಳಲಾಗಿದೆ. ಫಲಿತಾಂಶ ವೃದ್ಧಿಸಲು ವಿವಿಧ ಕ್ರಮ ತೆಗೆದುಕೊಳ್ಳಲಾಗಿದೆ. ಅದಕ್ಕಾಗಿ ಈಗಾಗಲೇ ತಾಲೂಕುವಾರು ಸಭೆ ನಡೆಸಿ ಕೆಲ ಸೂಚನೆಗಳನ್ನು ನೀಡಲಾಗಿದೆ. ಈ ಸಲ ಪಾಸಿಂಗ್ ಪ್ಯಾಕೇಜ್ ಸೂತ್ರವನ್ನು ರೂಪಿಸಿದ್ದು, ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳು ಕನಿಷ್ಠ ಅಂಕ ಪಡೆದು ಉತ್ತೀರ್ಣರಾಗುವಂತೆ ಮಾಡಲು ಕ್ರಮ ವಹಿಸಲಾಗಿದೆ.
ಎಚ್.ಕೆ. ಪಾಂಡು
ಉಪನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ