ಪ್ರಯಾಣಿಕರಿಗೆ ರೈಲು ಸೌಕರ್ಯ ಹೆಚ್ಚಿಸಿ

24 Jaggu 6-WEb
ಹುಬ್ಬಳ್ಳಿ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಕಚೇರಿಯಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು. ಎ.ಕೆ. ಸಿಂಗ್, ಅರವಿಂದ ಮಾಳಕಡೆ ಇತರರಿದ್ದರು.
Published on

ಬೆಳಗಾವಿ: ಬೆಳಗಾವಿ ಮತ್ತು ಸುತ್ತ್ತಲಿನ ಜಿಲ್ಲೆಗಳ ಜನರ ಅನುಕೂಲಕ್ಕಾಗಿ ಗೋವಾ-ಮಂಗಳೂರು- ಮೈಸೂರು ನಗರಗಳಿಗೆ ರೈಲು ಸಂಚಾರ ಆರಂಭಿಸಬೇಕು. ಇದರಿಂದ ಉತ್ತರ ಕರ್ನಾಟಕದ ಜನತೆಯ ವ್ಯಾಪಾರ, ವಾಣಿಜ್ಯ ವೃದ್ಧಿಯಾಗುತ್ತದೆ. ಶಿಕ್ಷಣ, ಪ್ರವಾಸಿ ತಾಣಗಳ ವೀಕ್ಷಣೆಗೂ ಪೂರಕ ವಾತಾವರಣ ರೂಪಿಸಿದಂತಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಹುಬ್ಬಳ್ಳಿ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕರ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಸಂಚಾರ ಮೈಸೂರುವರೆಗೆ ವಿಸ್ತರಿಸಬೇಕು. ಜತೆಗೆ ಮಂಗಳೂರು ರೈಲು ಪ್ರಾರಂಭಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕು ಎಂದರು.

ಹುಬ್ಬಳ್ಳಿ-ಮೀರಜ್ ರೈಲ್ವೆ ಮಾರ್ಗದ ದ್ವಿಪಥ ಕಾಮಗಾರಿ ತ್ವರಿತಗೊಳಿಸುವ ಮೂಲಕ ಹೆಚ್ಚಿನ ರೈಲುಗಳ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು. ಅಲ್ಲದೆ, ಈ ಮಾರ್ಗದಲ್ಲಿರುವ ಎಲ್ಲ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಬೇಕು ಎಂದು ಸೂಚಿಸಿದರು. ಬೆಂಗಳೂರು ನಂತರ ಅತಿ ಹೆಚ್ಚು ಜನ ಓಡಾಟದ ನಗರವಾಗಿ ಬೆಳೆಯುತ್ತಿರುವ ಬೆಳಗಾವಿಗೆ, ರೈಲ್ವೆ ಇಲಾಖೆ ವಿಶೇಷ ಗಮನ ನೀಡಬೇಕು ಎಂದು ಕಡಾಡಿ ಒತ್ತಾಯಿಸಿದರು.

ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಿಭಾಗಿಯ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್, ವ್ಯವಸ್ಥಾಪಕ ಅರವಿಂದ ಮಾಳಕಡೆ, ಪಿಸಿಸಿಎಂ ಅನಿಲ್ ಪವಿತ್ರನ್, ಸಿಪಿಟಿಎಂ ಎಚ್.ಎಂ. ದಿನೇಶ, ಟಿ.ವಿ. ಭೂಷಣ, ಪಿಆರ್‌ಒ ವಿಜಯಾ, ಗಣ್ಯರಾದ ಪಿ.ಎನ್. ಮುಳ್ಳೂರ, ಬಸವರಾಜ ಹುಳ್ಳೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net