

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಬಸ್ ಕೊರತೆ ಉಂಟಾಗಿ ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ನಿಂತು ತೊಂದರೆ ಅನುಭವಿಸುವಂತಾಯಿತು.
ವಾರಾಂತ್ಯ ರಜೆ ಹಾಗೂ ಎಣ್ಣೆಮಜ್ಜನ ಸೇವೆ ಹಿನ್ನೆಲೆಯಲ್ಲಿ 2 ದಿನಗಳಿಂದ ಮ.ಬೆಟ್ಟಕ್ಕೆ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಚಾ.ನಗರ ಸೇರಿದಂತೆ ಇತರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅದರಲ್ಲೂ ಶಕ್ತಿ ಯೋಜನೆ ಪರಿಣಾಮ ಮಹಿಳೆಯರು ಭೇಟಿ ನೀಡಿದ್ದರು. ಇದರಲ್ಲಿ ಕೆಲವರು ಶನಿವಾರ ಎಣ್ಣೆಮಜ್ಜನ ಸೇವೆ ಮುಗಿದ ಬಳಿಕ ಊರಿಗೆ ತೆರಳಿದ್ದರೆ, ಬಹುತೇಕ ಭಕ್ತರು ಶ್ರೀ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿದ್ದರು. ಭಾನುವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮೀರಿ ಭಕ್ತರ ದಂಡೇ ಹರಿದು ಬಂತು.
ದೇವರ ದರ್ಶನ, ಹರಕೆ ಸೇವೆ ಹಾಗೂ ವಿವಿಧ ಉತ್ಸವಾಧಿ ಸೇವೆಯಲ್ಲಿ ಭಾಗಿಯಾಗಿದ್ದರು. ಮಧ್ಯಾಹ್ನದ ಬಳಿಕ ಊರಿನತ್ತ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಕೆಲ ಬಸ್ ಘಟಕಗಳಿಂದ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಆದರೆ ಹೆಚ್ಚಿನ ಭಕ್ತರು ಆಗಮಿಸಿ ದ್ದರಿಂದ ಬಸ್ ಕೊರತೆ ಉಂಟಾಯಿತು. ಇದರಿಂದ ಭಕ್ತರು ಬಸ್ಸಿಗಾಗಿ ಗಂಟೆಗಟ್ಟಲೇ ಕಾದು ನಿಲ್ಲುವಂತಾಯಿತು. ನಿಲ್ದಾಣಕ್ಕೆ ಬಸ್ ಆಗಮಿಸುತ್ತಿದ್ದಂತೆಯೇ ಭಕ್ತರು ಬಸ್ ಹತ್ತಲು ಮುಗಿ ಬಿದ್ದು ನೂಕುನುಗ್ಗಲಿನಲ್ಲೇ ತೆರಳಿದರು. ಕೆಲ ಭಕ್ತರು ಖಾಸಗಿ ಬಸ್‌ಗಳ ಮೊರೆ ಹೋದರು.
ಸಂಚಾರ ಸಿಕ್ಕು: ಮ.ಬೆಟ್ಟಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಆದರೆ ಸುಗಮ ಸಂಚಾರಕ್ಕೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸದ ಪರಿಣಾಮ ಅರಣ್ಯ ಪ್ರದೇಶದಿಂದ ಕೂಡಿರುವ ತಾಳುಬೆಟ್ಟ ಮ.ಬೆಟ್ಟ ಮಾರ್ಗದಲ್ಲಿ ಆಗಾಗ್ಗೆ ಸಂಚಾರ ಸಿಕ್ಕು ನಿರ್ಮಾಣವಾಗುತ್ತಿತ್ತು. ಆನೆತಲೆ ದಿಂಬದಲ್ಲಿ ಬೆಳಗ್ಗೆ 11ರ ವೇಳೆಯಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರ ಸಿಕ್ಕು ನಿರ್ಮಾಣವಾದ್ದರಿಂದ ಈ ಮಾರ್ಗದ ಎರಡು ಕಡೆ ಸುಮಾರು 1 ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಭಕ್ತರು ಕಿರಿಕಿರಿ ಅನುಭವಿಸುವಂತಾಯಿತು.