45 ನಿಮಿಷ ರೈಲು ತಡೆದ ಪ್ರಯಾಣಿಕರು!

ಬಂಗಾರಪೇಟೆಯಲ್ಲಿ ಪ್ರಯಾಣಿಕರು ರೈಲು ತಡೆದು ಪ್ರತಿಭಟಿಸಿದರು
ಬಂಗಾರಪೇಟೆಯಲ್ಲಿ ಪ್ರಯಾಣಿಕರು ರೈಲು ತಡೆದು ಪ್ರತಿಭಟಿಸಿದರು
Published on

ಬಂಗಾರಪೇಟೆ-ಬೆಂಗಳೂರು ಟೆನ್​ಗೆ ಹೆಚ್ಚುವರಿ ಬೋಗಿಗಳ ಅಳವಡಿಕೆಗೆ ಪಟ್ಟು

ಬಂಗಾರಪೇಟೆ: ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸುವಂತೆ ಒತ್ತಾಯಿಸಿ ಪ್ರಯಾಣಿಕರು ಬುಧವಾರ ಬಂಗಾರಪೇಟೆ ನಿಲ್ದಾಣದಲ್ಲಿ 45 ನಿಮಿಷ ರೈಲು ತಡೆದು ಪ್ರತಿಭಟಿಸಿದರು. ಪಟ್ಟಣದ ರೈಲು ನಿಲ್ದಾಣದಿಂದ ಬೆಂಗಳೂರಿಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಅದರಲ್ಲೂ ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವವರು ಮಾರಿಕುಪ್ಪಂ&ಬೆಂಗಳೂರು ಪ್ಯಾಸೆಂಜರ್​ ರೈಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಈ ಮೊದಲು ರೈಲಿಗೆ 16 ಬೋಗಿ ಅಳವಡಿಸಲಾಗುತ್ತಿತ್ತಾದರೂ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದ ನೆಪದಲ್ಲಿ ರೈಲಿನ ಬೋಗಿಗಳನ್ನು ಕಡಿಮೆ ಮಾಡಿ, ಪ್ರಯಾಗರಾಜ್​ ಮಾರ್ಗಕ್ಕೆ ಹೆಚ್ಚುವರಿ ಬೋಗಿ ಅಳವಡಿಸಲಾಗಿದೆ. ಪರಿಣಾಮ ಬೆಂಗಳೂರಿಗೆ ಕೆಲಸ&ಕಾರ್ಯಗಳಿಗೆ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿದೆ ಎಂದು ಪ್ರಯಾಣಿಕರು ಆರೋಪಿಸಿದರು.ಬೆಂಗಳೂರು&ಮಾರಿಕುಪ್ಪಂ ರೈಲು ಬೆಳಗ್ಗೆ 8.30ಕ್ಕೆ ಬಂಗಾರಪೇಟೆ ಬರುತ್ತದೆ. ಕಡಿಮೆ ಬೋಗಿಗಳು ಇರುವ ಕಾರಣ ಕೆಜಿಎಫ್​ನಲ್ಲಿಯೇ ರೈಲು ತುಂಬಿರುತ್ತದೆ. ಪರಿಣಾಮ ಬಂಗಾರಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬೆಂಗಳೂರಿಗೆ ಹೋಗುವ ಜನ ರೈಲಿನಲ್ಲಿ ನಿಂತು ಪ್ರಯಾಣಿಸಲೂ ಜಾಗವಿಲ್ಲದಂತಾಗಿದೆ. ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಬೋಗಿಗಳನ್ನು ಹೆಚ್ಚು ಮಾಡುವಂತೆ ಒತ್ತಾಯಿಸಿದರೂ ಕ್ರಮವಾಗದ ಕಾರಣ ರೈಲು ತಡೆಯಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಸ್ಥಳಕ್ಕೆ ರೈಲ್ವೆ ಇಲಾಖೆಯ ಡಿಆರ್​ಎಂ ಅಮಿತೇಶ್​ ಕುಮಾರ್​ ಸಿನ್ಹಾ ಭೇಟಿ ನೀಡಿ ಮಾತನಾಡಿ, ತಾಂತ್ರಿಕ ಕಾರಣಗಳಿಂದ ಸದ್ಯ ಮಾರಿಕುಪ್ಪಂ&ಬೆಂಗಳೂರು ಮಾರ್ಗದ ರೈಲಿಗೆ 8 ಕೋಚ್​ ಅಳವಡಿಸಲಾಗಿದೆ. ಜನರಿಗೆ ಸಂಚರಿಸಲು ಸಮಸ್ಯೆಯಾದ ಪರಿಣಾಮ ಗುರುವಾರದಿಂದ 12 ಕೋಚ್​ಗಳಿಗೆ ಹೆಚ್ಚಿಸಲಾಗುವುದು. ಮುಂದಿನ ದಿನಗಳಲ್ಲಿ 16 ಬೋಗಿಗಳ ಅಳವಡಿಕೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ: ಸೌತ್​ ವೆಸ್ಟರ್ನ್​ ರೈಲ್ವೇ ಡಿಆರ್​ಎಂ ಅಮಿತೇಶ್​ ಕುಮಾರ್​ ಸಿನ್ಹಾ ನೇತೃತ್ವದ ತಂಡ ಜಿಲ್ಲೆಯ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿತು. ಈ ವೇಳೆ ಮಾತನಾಡಿದ ಅವರು, ಬಂಗಾರಪೇಟೆ ರೈಲು ನಿಲ್ದಾಣವನ್ನು ಅಮೃತಭಾರತ ಯೋಜನೆಯಯಡಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಈಗಾಗಲೇ ವಾಹನಗಳ ಪಾರ್ಕಿಂಗ್​, ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದರು. ಬಳಿಕ ಜಿಲ್ಲೆಯ ರೈಲ್ವೆ ಅಂಡರ್​ಪಾಸ್​ ಹಾಗೂ ಫ್ಲೆ ಓವರ್​ಗಳ ಬೇಡಿಕೆ ಮತ್ತು ಬಂಗಾರಪೇಟೆ&ಮಾರಿಕುಪ್ಪಂ ಡಬಲ್​ ಟ್ರಾ$್ಯಕ್​ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಕೋಲಾರ&ವೈಟ್​ ಫಿಲ್ಡ್​ ಹೊಸ ಲೈನ್​ಗಳನ್ನು ಕಾರ್ಯಗತಗೊಳಿಸುವಂತೆ ಜನ ಒತ್ತಾಯಿಸಿದಾಗ ಹೊಸ ಲೈನ್​ಗಳ ಬಗ್ಗೆ ಪರಿಶೀಲನೆ ಮಾಡುವುದಾಗಿ ತಿಳಿಸಿದರು. ಕೆಲವರು ಅವೈಜ್ಞಾನಿಕ ಅಂಡರ್​ ಪಾಸ್​ಗಳ ಪರಿಶೀಲನೆ ಹಾಗೂ ರೈಲು ನಿಲುಗಡೆ ಕುರಿತು ದೂರು ಸಲ್ಲಿಸಿದರು.

ಪ್ರಯಾಗ್​ರಾಜ್​ಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸುವ ಸಲುವಾಗಿ ಬಂಗಾರಪೇಟೆ&ಬೆಂಗಳೂರು ಮಾರ್ಗದಲ್ಲಿ ಬೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿರುವುದರಿಂದ ಸ್ಥಳಿಯ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿದೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದು, ಅಧಿಕಾರಿಗಳು ತಾಂತ್ರಿಕ ಕಾರಣ ಹೇಳಿದ್ದಾರೆ. ಮುಂದಿನ 15 ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದು, ನಾನು ಸಹ ಅಧಿಕಾರಿಗಳ ಬಳಿ ಮಾಹಿತಿ ಪಡೆಯುವೆ. - ಎಂ.ಮಲ್ಲೇಶ್​ ಬಾಬು ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net