

ಚಿಕ್ಕಮಗಳೂರು: ರಸ್ತೆ ಸಾರಿಗೆ ನಿಗಮದ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಏ.7 ರಂದು ಬಸ್ ಸಂಚಾರ ಸ್ಥಗಿತಗೊಳಿಸುತ್ತಿದ್ದು, ಯಾವುದೇ ಬಸ್‍ಗಳು ರಸ್ತೆಗಿಳಿಯುವುದಿಲ್ಲ. ಹೀಗಾಗಿ ಸಾರ್ವಜನಿಕ ಓಡಾಟಕ್ಕೆ ತೀವ್ರ ಸಮಸ್ಯೆಯಾಗಲಿದೆ. ನಿಗಮದ ನೌಕರರ ಅನಿರ್ದಿಷ್ಟ ಕಾಲದ ಮುಷ್ಕರ ಬಿಸಿ ಮಂಗಳವಾರ ಮಧ್ಯಾಹ್ನದಿಂದಲೇ ಪ್ರಯಾಣಿಕರಿಗೆ ತಟ್ಟಿದ್ದು, ಬಸ್‍ಗಳು ಸಂಚಾರ ನಿಲ್ಲಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವ ಸನ್ನಿವೇಶ ಸೃಷ್ಟಿಯಾಯಿತು.
ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಖಾಸಗಿ ಬಸ್‍ಗಳು ಹಾಗೂ ಮ್ಯಾಕ್ಸಿಕ್ಯಾಬ್‍ಗಳ ವ್ಯವಸ್ಥೆಗೆ ಸೂಚನೆ ನೀಡಿದ್ದು, ಅವು ಏ.7 ರಿಂದಷ್ಟೇ ಆರಂಭಗೊಳ್ಳಲಿರುವುದರಿಂದ ಸಾಕಷ್ಟು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಉಳಿಯುವ ಪರಿಸ್ಥಿತಿ ತಲೆದೋರಿತು. ಹೊರ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ, ಗದಗ, ಬಾಗಲಕೋಟೆ, ಹೂವಿನಹಡಗಲಿ ಮತ್ತಿತರ ಕಡೆಗಳಿಂದ ಚಿಕ್ಕಮಗಳೂರು ಮಾರ್ಗವಾಗಿ ಧರ್ಮಸ್ಥಳ, ಸುಬ್ರಹ್ಮಣ್ಯ, ಮಂಗಳೂರು ಕಡೆಗೆ ತೆರಳಿ ಮರಳುವ ಬಸ್‍ಗಳನ್ನು ಹೊರತುಪಡಿಸಿದರೆ ಚಿಕ್ಕಮಗಳೂರು ಡಿಪೋದಿಂದ ಹೊರಡುವ ಯಾವುದೇ ಬಸ್‍ಗಳು ಓಡಾಡದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.
ಗ್ರಾಮಾಂತರಕ್ಕೆ ಬಸ್ ಇಲ್ಲ:
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಾದ ಗಂಜಲಗೋಡು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಹಳೇಬೀಡು, ಮರ್ಲೆ, ನಿಡಘಟ್ಟ, ಕಡೂರು, ಬೀರೂರು, ಶಾಂತವೇರಿ, ತರೀಕೆರೆ, ಜಾವಗಲ್, ಬಾಣಾವರ, ಅರಸೀಕೆರೆ ಮಾರ್ಗದಲ್ಲಿ ತೆರಳಿ ತಂಗುವ ಬಸ್‍ಗಳು ಮಂಗಳವಾರ ಸಂಜೆಯಿಂದಲೇ ಸ್ಥಗಿತಗೊಂಡ ಕಾರಣ ಪ್ರಯಾಣಿಕರು ಸಮಸ್ಯೆ ಅನುಭವಿಸಬೇಕಾಯಿತು. ಅಸ್ಸಾಂ, ತಮಿಳುನಾಡು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ತೆರಳುವ ಕಾರ್ಮಿಕರು ಊರು ತಲುಪುವ ತವಕದಲ್ಲಿದ್ದರೆ ಈ ಮಾರ್ಗದಲ್ಲಿ ಸಾಗುವ ಬೆರಳೆಣಿಕೆಯ ಬಸ್‍ಗಳಿಗೆ ಪ್ರಯಾಣಿಕರ ನೂಕು ನುಗ್ಗಲು ಕಂಡು ಬಂದಿತು. ತಮ್ಮ ಸರಕು ಸರಂಜಾಮುಗಳನ್ನು ಹಿಡಿದು ಬಂದಿದ್ದ ಕಾರ್ಮಿಕ ಕುಟುಂಬಗಳು ಸಮಸ್ಯೆ ಅನುಭವಿಸಬೇಕಾಯಿತು.
ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್ ಸೇವೆ:
ರಾಜ್ಯಾದ್ಯಾಂತ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಖಾಸಗಿ ಬಸ್‍ಗಳು ಹಾಗೂ ಮ್ಯಾಕ್ಸಿಕ್ಯಾಬ್‍ಗಳನ್ನು ಕಾರ್ಯಾಚರಣೆಗೆ ಇಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿಗಮದ ನೌಕರರ ಮುಷ್ಕರ ಕುರಿತು ಸಮಾಲೋಚಿಸಲು ಬಸ್ ಮಾಲೀಕರು ಹಾಗೂ ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಪದಾಧಿಕಾರಿಗಳ ಜತೆ ಮಂಗಳವಾರ ಸಂಜೆ ಆಯೋಜಿಸಿದ್ದ ತುರ್ತು ಸಭೆಯಲ್ಲಿ ಮಾತನಾಡಿದರು.
ನಿಗಮದ ನಿಲ್ದಾಣದಿಂದಲೇ ವಾಹನ ವ್ಯವಸ್ಥೆ:
ನಿಗಮದ ಬಸ್‍ಗಳು ಸಂಚರಿಸುವ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ಅನನುಕೂಲವಾಗಬಾರದೆಂಬ ದೃಷ್ಟಿಯಿಂದ ಜಿಲ್ಲೆಯ ಎಲ್ಲ ತಾಲೂಕಿನ ನಿಗಮದ ಬಸ್ ನಿಲ್ದಾಣಗಳಿಂದ ಖಾಸಗಿ ಬಸ್ ಹಾಗೂ ಮ್ಯಾಕ್ಸಿಕ್ಯಾಬ್‍ಗಳು ಸಂಚರಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಎಲ್ಲ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಖಾಸಗಿ ಬಸ್‍ಗಳು ಸಂಚಾರ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ಖಾಸಗಿ ಬಸ್‍ಗಳು ಹಾಗೂ ಮ್ಯಾಕ್ಸಿ ಕ್ಯಾಬ್‍ಗಳು ರಸ್ತೆ ಸಾರಿಗೆ ನಿಗಮ ನಿಗದಿಪಡಿಸಿರುವ ದರದಲ್ಲಿಯೇ ಪ್ರಯಾಣಿಕರನ್ನು ಕರೆದೊಯ್ಯಲು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸೂಚಿಸಲಾಗಿದ್ದು, ಪ್ರಯಾಣಿಕರಿಂದ ಯಾವುದೇ ರೀತಿಯ ದೂರುಗಳು ಬಾರದಂತೆ ಕಾರ್ಯ ನಿರ್ವಹಿಸಬೇಕು ಎಂದು ಖಾಸಗಿ ಬಸ್ ಮಾಲೀಕರಿಗೆ ಸೂಚಿಸಿದರು.
ಜಿಲ್ಲಾದ್ಯಂತ ಪೊಲೀಸ್ ರಕ್ಷಣೆ:
ಪ್ರಯಾಣಿಕರ ಭದ್ರತಾ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾದ್ಯಂತ ಪೊಲೀಸ್ ರಕ್ಷಣಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಸ್ಪಿ ಎಂ.ಎಚ್.ಅಕ್ಷಯ್ ತಿಳಿಸಿದರು. ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳ್ಕರ್, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ಇದ್ದರು. ಸಹಾಯಕ್ಕೆ ಸಂಪರ್ಕಿಸಿ: ಪ್ರಯಾಣಿಕರು ಯಾವುದೇ ದೂರುಗಳಿದ್ದಲ್ಲಿ ಕೆಎಸ್‍ಆರ್‍ಟಿಸಿ ದೂ.ಸಂ:7760990407, 08262-229869 ಹಾಗೂ ಪೊಲೀಸ್ ಠಾಣೆ ದೂ.ಸಂ: 9480805100, 08262-230540 ಅನ್ನು ಸಂಪರ್ಕಿಸಬಹುದು.