ಹಳೆಯಂಗಡಿ ಮುಖ್ಯ ಪೇಟೆ ಅವ್ಯವಸ್ಥೆ : ಸರ್ವೀಸ್ ರೋಡ್ ಇಲ್ಲದೆ ಪ್ರಯಾಣಿಕರಿಗೆ ಸಂಕಷ್ಟ : ಅರ್ಧಂಬರ್ಧ ಕಾಮಗಾರಿ

New Project (45)
Published on

ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ

ಸರ್ಫಿಂಗ್ ಮೂಲಕ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿರುವ ಮೂಲ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಮುಖ್ಯ ಪೇಟೆ ಅವ್ಯವಸ್ಥೆಗಳ ಆಗರವಾಗಿ ಪರಿಣಮಿಸಿದ್ದು, ಹೆದ್ದಾರಿ ಸಂಚಾರ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಶಾಶ್ವತ ಸಮಸ್ಯೆಯಾಗಿ ಬೆಳೆಯುತ್ತಿದೆ.

ಸರ್ವೀಸ್ ರಸ್ತೆ ಇಲ್ಲ

ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಹಳೆಯಂಗಡಿ ಹೆದ್ದಾರಿ ಜಂಕ್ಷನ್ ಸೂಕ್ತ ಸರ್ವೀಸ್ ರಸ್ತೆ ಇಲ್ಲದೆ ರಸ್ತೆ ದಾಟುವವರಿಗೆ ಹಾಗೂ ಹೆದ್ದಾರಿ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೆ ದಿನನಿತ್ಯ ಅಪಘಾತ ಸ್ಥಳವಾಗಿ ಪರಿಣಮಿಸಿದೆ. ಸಣ್ಣ ಮಳೆ ಬಂದರೆ ಸಾಕು, ಕೆಸರು ಕೊಂಪೆಯಾಗುವ ಹೆದ್ದಾರಿ, ರಸ್ತೆ ಬದಿಗಳು, ಮಳೆ ನಿಂತ ಬಳಿಕ ಜನರಿಗೆ ಹಾಗೂ ವಾಹನಗಳಿಗೆ ಕೆಸರು ನೀರು ಪ್ರೋಕ್ಷಣೆ ಮಾಡುತ್ತಾ ಸಮಸ್ಯೆಗೀಡು ಮಾಡುತ್ತಿವೆ.

ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸ್ಥಳೀಯರು ಕೇಂದ್ರ ಹೆದ್ದಾರಿ ಇಲಾಖೆಗೆ ದೂರು ನೀಡಿದ ಕೂಡಲೇ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಅರ್ಧಂಬರ್ಧ ಚರಂಡಿ ಒಡೆದು ಪೈಪ್ ಹಾಕಲು ತೋಡಿದ ಹೊಂಡ ಹಾಗೆಯೇ ಬಿಟ್ಟು ಕೈತೊಳೆದುಕೊಂಡಿದ್ದು ಮಣ್ಣು ಕೂಡಾ ಅಲ್ಲಿಯೇ ಇದೆ. ಈ ಅರ್ಧಂಬರ್ಧ ಕಾಮಗಾರಿ ಜನ ಸಾಮಾನ್ಯರಿಗೆ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ.

ಹಳೆಯಂಗಡಿ ಜಂಕ್ಷನ್‌ನಿಂದ ಕಿನ್ನಿಗೋಳಿ, ಕಟೀಲು, ಮೂಡುಬಿದಿರೆ, ಬೆಳ್ಮಣ್ ಕಡೆಗೆ ಹೋಗುವ ರಸ್ತೆ ಸಂಪರ್ಕ ಇಂದಿರಾ ನಗರ ರೈಲ್ವೆ ಕ್ರಾಸಿಂಗ್‌ವರೆಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಹೊಂಡ-ಗುಂಡಿಗಳಿಂದ ಕೂಡಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ರಸ್ತೆ ಗುಂಡಿ: ರಸ್ತೆಗಳಲ್ಲಿ ಆಳ ಗುಂಡಿಗಳು ನಿರ್ಮಾಣವಾಗಿದ್ದು ವಾಹನಗಳ ಚಕ್ರ ಇಳಿದರೆ ಟಯರ್ ಬ್ಲಾಸ್ಟ್ ಆಗುವ ಮೂಲಕ ಬೃಹತ್ ಅಪಾಯಕ್ಕೀಡು ಮಾಡುತ್ತದೆ. ಪ್ರತಿ ಮಳೆಗಾಲದಲ್ಲಿ ಹಳೆಯಂಗಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗಳ ಆಗರವಾಗುತ್ತಿದ್ದರೂ ಹೆದ್ದಾರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಶ್ವತ ಪರಿಹಾರಕ್ಕೆ ಆಗ್ರಹ

ಹಳೆಯಂಗಡಿ ಪೇಟೆಯಲ್ಲಿ ಸರಿಯಾದ ಸರ್ವೀಸ್ ರಸ್ತೆ ಇಲ್ಲ. ಚರಂಡಿ ವ್ಯವಸ್ಥೆಯೂ ಕೂಡ ಇಲ್ಲ. ಹೆದ್ದಾರಿಯಿಂದ ಕಿನ್ನಿಗೋಳಿ ಕಡೆಗೆ ಹೋಗುವ ರಸ್ತೆಯ ತಿರುವಿನಲ್ಲಿ ಬೃಹತ್ ಆಕಾರದ ಗುಂಡಿಗಳು ಸೃಷ್ಟಿಯಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಪ್ರತಿ ಮಳೆಗಾಲದಲ್ಲೂ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದೇವೆ. ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಹಳ್ಳದ ರೀತಿಯಲ್ಲಿ ನೀರು ರಸ್ತೆಯಲ್ಲೇ ನಿಂತು ಬಹಳಷ್ಟು ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಪ್ರತಿ ಬಾರಿ ಹೆದ್ದಾರಿ ಇಲಾಖೆಗೆ ದೂರು ನೀಡುತ್ತಾ ಬಂದಿದ್ದೇವೆ. ಆದರೆ ಕೆಲವೊಂದು ಬಾರಿ ತಾತ್ಕಾಲಿಕವಾಗಿ ದುರಸ್ತಿಪಡಿಸುತ್ತಾರೆ. ಇದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಇಲಾಖೆ ಆದಷ್ಟು ಬೇಗ ತೆರೆದ ಗುಂಡಿಗಳನ್ನು ಮುಚ್ಚಬೇಕು. ಹಳೆಯಂಗಡಿ ಪೇಟೆಯಲ್ಲಿ ಉದ್ಭವಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಲ್ಪಿಸಬೇಕು. ಅದ್ದಿ ಬೊಳ್ಳೂರು, ಸಾಮಾಜಿಕ ಕಾರ್ಯಕರ್ತ ಸಾರ್ವಜನಿಕ ಸಮಸ್ಯೆಗಳನ್ನು ಹೆದ್ದಾರಿ ಇಲಾಖೆಗೆ ತಿಳಿಸಿದ್ದೇವೆ. ಮಳೆ ಮುಗಿದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ. ತೋಡಿಗೆ ಪೈಪ್ ಹಾಕುವ ವಿಚಾರದಲ್ಲಿ ಮುಂದೆ ಸರ್ವಿಸ್ ರಸ್ತೆಯಾಗುವ ಸಂದರ್ಭ ಮಾಡಲಾಗುವುದು ಎಂದಿದ್ದಾರೆ. ಪೂರ್ಣಿಮಾ ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ https://www.vijayavani.net/beluvai-gram-sabha-2 https://www.vijayavani.net/town-is-submerged-during-the-rainy-season

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net