

ಚಿತ್ರದುರ್ಗ: ಮೂವತ್ತೆಂಟು ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ಮಂಗಳವಾರ ನಡೆಸಿದ ಮುಷ್ಕರದಿಂದ ಪ್ರಯಾಣಿಕರು ಪರದಾಡುವಂತಾಯಿತು. ಆದರೆ ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಸಂಸ್ಥೆಯ ಬಸ್‌ಗಳ ಸಂಚಾರ ಸಂಜೆ ಐದರ ಹೊತ್ತಿಗೆ ಪುನಾರಂಭಗೊಂಡಿತು.
ಮುಷ್ಕರ ಮುಂದೂಡಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ಡಿಪೋದಲ್ಲಿ ಸಂಜೆ ವಿವಿಧೆಡೆ ಸಂಚರಿಸುವ ಬಸ್‌ಗಳ ಕಂಡಕ್ಟರ್,ಚಾಲಕರು ಕೆಲಸಕ್ಕೆ ಹಾಜರಾದರು. ಪರಸ್ಥಳದಲ್ಲಿ ನೈಟ್‌ಹಾಲ್ಟ್ ಆಗುವ ಬಸ್‌ಗಳನ್ನು ಕಳಿಸಲು ಆದ್ಯತೆ ನೀಡಲಾಗಿತ್ತು. ಸಿಬ್ಬಂದಿ ಮುಷ್ಕರ ಕೈ ಬಿಟ್ಟಿದ್ದಾರೆಂಬ ಸುದ್ದಿಯಿಂದ ಪ್ರಯಾಣಿಕರು ನಿಲ್ದಾಣದೆಡೆ ಧಾವಿಸತೊಡಗಿದರು.
ಪ್ರತಿಭಟನೆ ಮಾಹಿತಿ ಗೊತ್ತಿಲ್ಲದ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದಾಗ ಬಸ್‌ಗಳಿಲ್ಲದ ಸುದ್ದಿ ತಿಳಿದು ಹೌಹಾರಿದರು. ಚಿತ್ರದುರ್ಗ ಡಿಪೋ ಬಳಿ ಸೋಮವಾರ ರಾತ್ರಿಯೇ ನೌಕರರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದ್ದರು. ನೌಕರರ ಬಿಗಿ ನಿಲುವಿಂದ ವಿಚ ಲಿತರಾದಂತೆ ಕಂಡು ಬಂದ ನಿಗಮದ ಅಧಿಕಾರಿಗಳು ಬಂದೋಬಸ್ತ್‌ಗೆ ಜಿಲ್ಲಾರಕ್ಷಣಾಧಿಕಾರಿ ಮೊರೆ ಹೋಗಿದ್ದರು.
ಸಂಸ್ಥೆ ಬಸ್‌ಗಳ ಸಂಚಾರ ಅತ್ಯಂತ ವಿರಳವಾಗಿತ್ತು. ನಿಗಮದ ಚಿತ್ರದುರ್ಗ ವಿಭಾಗದ ಚಿತ್ರದುರ್ಗ, ಹೊಸದುರ್ಗ, ಪಾವಗಡ ಮತ್ತು ಚಳ್ಳಕೆರೆ ಡಿಪೋಗಳಿಂದ ನಿತ್ಯ 337ಕ್ಕೂ ಹೆಚ್ಚು ಬಸ್‌ಗಳು ಸಂಚರಿಸ ಬೇಕಿತ್ತು. ಆದರೆ ಸಂಜೆ 4ರ ಸಮಯಕ್ಕೆ ವಿಭಾಗ ವ್ಯಾಪ್ತಿಯಲ್ಲಿ 65 ಬಸ್‌ಗಳು ಮಾತ್ರ ಸಂಚರಿಸಿದ್ದವು.
ಜಿಲ್ಲಾಡಳಿತದ ಸೂಚನೆ ಮೇರೆಗೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು 137 ಬಸ್‌ಗಳನ್ನು ಪರ್ಯಾಯವಾಗಿ ಗುರುತಿಸಿದ್ದರು. ಇವುಗಳೊಂದಿಗೆ 12 ಒಪ್ಪಂದ ವಾಹನಗಳು, ನಿತ್ಯ ಸಂಚರಿಸುವ 242 ಖಾಸಗಿ ಬಸ್‌ಗಳು ಹಲವು ಕೆಎಸ್‌ಆರ್‌ಟಿಸಿ ರೂಟ್‌ಗಳಲ್ಲಿ ಸಂಚರಿಸಿದವು.
ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು, ಕೋರ್ಟ್, ಕಚೇರಿಗಳಿಗೆ ತೆರಳುವವರು ಸಹಿತ ಅನೇಕರು ತೊಂದರೆಗೆ ಒಳಗಾದರು. ನಿಲ್ದಾಣದ ಹೊರಗೆ ಹಲವು ಖಾಸಗಿ ಬಸ್‌ಗಳಿದ್ದವು. ಬೀಕೋ ಎನ್ನುತ್ತಿದ್ದ ನಿಲ್ದಾಣದಲ್ಲಿ ಒಂದೊ, ಎರಡೋ ಸಂಸ್ಥೆ ಬಸ್‌ಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದವು.
ಎರಡು ತಿಂಗಳ ಹಸುಗೂಸಿನೊಂದಿಗೆ ಬಾಣಂತಿಯೊಬ್ಬರು ಪರಸ್ಥಳಕ್ಕೆ ತೆರಳಲು ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ಅವರ ಬಳಿ ಹಣವಿರಲಿಲ್ಲ.
ಬಸ್ಸಿಗಾಗಿ ಕಾದು ಹಲವರು ನಿಲ್ದಾಣದಲ್ಲೇ ನಿದ್ರೆಗೆ ಜಾರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಖಾಸಗಿ ಬಸ್‌ಗಳು ಭರ್ತಿಯಾಗಲಿ ಎಂದು ಕಾದಿದ್ದ ಸಿಬ್ಬಂದಿಯೊಂದಿಗೆ ಟೈಮ್ ಆಗುತ್ತಿದೆ ಎಂದು ಪ್ರಯಾಣಿಕರು ವಾಗ್ವಾದಕ್ಕೆ ಇಳಿದಿದ್ದು ಕಂಡು ಬಂತು.
ನಿಗಮದ ಅಧಿಕಾರಿಗಳ ಮನವಿ ಮೇರೆಗೆ ಪೊಲೀಸರು ಡಿಪೋ ಮತ್ತು ನಿಲ್ದಾಣದ ಬಳಿ ಭದ್ರತೆ ಒದಗಿಸಿದ್ದರು. ಎಎಸ್‌ಪಿ ಉಮೇಶ್ ಈಶ್ವರ್‌ನಾಯಕ್,ಡಿವೈಎಸ್‌ಪಿ ಪಿ.ಕೆ. ದಿನಕರ್, ಪಿಐಗಳಾದ ಪ್ರಕಾಶ್,ತಿಮ್ಮಣ್ಣ ಮತ್ತಿತರ ಅಧಿಕಾರಿಗಳು ನಿಲ್ದಾಣದಲ್ಲೇ ಬಹಳ ಹೊತ್ತಿನವರೆಗೆ ಬೀಡುಬಿಟ್ಟಿದ್ದರು.
ಜಿಲ್ಲಾಡಳಿತದ ಕೋರಿಕೆ ಮೇರೆಗೆ ಖಾಸಗಿ ಬಸ್‌ಗಳನ್ನು ಪರ್ಯಾಯ ವ್ಯವಸ್ಥೆಗೆ ಬಳಸಿಕೊಳ್ಳಲಾಗಿತ್ತು ಎಂದು ಆರ್‌ಟಿಒ ಭರತ್ ಕಾಳಿಸಿಂಗೆ ಹೇಳಿದರು. ಚಿತ್ರದುರ್ಗ ವಿಭಾಗ ವ್ಯಾಪ್ತಿಯ ಹೊಸದುರ್ಗ ಡಿಪೋದಿಂದ 71 ಬಸ್‌ಗಳು, ಪಾವಗಡ-41, ಚಳ್ಳಕೆರೆ -62 ಹಾಗೂ ಚಿತ್ರದುರ್ಗ ಡಿಪೋದಿಂದ 163ಕ್ಕೂ ಅಧಿಕ ಬಸ್‌ಗಳಿದ್ದು, 1341 ಸಿಬ್ಬಂದಿ ಇದ್ದಾರೆ.
-----------------
ಸಹಜ ಸ್ಥಿತಿಗೆ
ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರ ಮರು ಆರಂಭವಾಗಲಿದೆ. ಮಂಗಳವಾರ ರಾತ್ರಿಯಿಂದಲೇ ಪರಿಸ್ಥಿತಿ ಸಹಜ ಸ್ಥಿತಿಗೆ ಹಾಗೂ ಬುಧವಾರ ಬೆಳಗ್ಗೆ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಲಿದೆ.
ಕೆ. ವೆಂಕಟೇಶ್, ವಿಭಾಗೀಯ ನಿಯಂತ್ರಕ, ಚಿತ್ರದುರ್ಗ
----
ಶೇ.25 ಸಂಚಾರ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೌಕರರು ಮುಷ್ಕರಕ್ಕೆ ಇಳಿದಿದ್ದರು. ಪ್ರತಿಭಟನೆ ನಡೆದಿದ್ದರೂ ಮಂಗಳವಾರ ಸಂಜೆ ಹೊತ್ತಿಗೆ ಶೇ.24-25 ಬಸ್‌ಗಳು ವಿಭಾಗ ವ್ಯಾಪ್ತಿಯ ಡಿಪೋಗಳಿಂದ ಸಂಚರಿಸಿವೆ. ಜಿಲ್ಲಾಡಳಿತ ಮತ್ತು ಪೊಲೀಸರಿಂದ ನಿಗಮಕ್ಕೆ ಸೂಕ್ತ ಸಹಕಾರ ದೊರೆತಿದೆ.
ಬಿ.ಎಸ್. ನಾಗರಾಜಮೂರ್ತಿ,ಡೆಪ್ಯೂಟಿ ಚೀಫ್ ಮೆಕಾನಿಕಲ್ ಇಂಜಿನಿಯರ್(ಚಿತ್ರದುರ್ಗ ವಿಭಾಗ ಉಸ್ತುವಾರಿ ಅಧಿಕಾರಿ)
---------
ಸಾರಿಗೆ ನೌಕರರ ಮುಷ್ಕರದಿಂದ ಪರದಾಟ
ಹಿರಿಯೂರು: ಸಾರಿಗೆ ನಿಗಮಗಳ ನೌಕರರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಬಸ್ ಸಂಚಾರ ಸ್ಥಗಿತಗೊಳಿಸಿದ ಪರಿಣಾಮ ಪ್ರಯಾಣಿಕರು ಪರದಾಡಿದರು.
ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆಯಿಂದಲೇ ಬಸ್‌ಗಳ ಸಂಚಾರ ಇಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಸಂಜೆವರೆಗೆ ಬಸ್‌ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದವು.
ಬೆಂಗಳೂರು, ದಾವಣಗೆರೆ, ಹಾಸನ, ತುಮಕೂರು, ಬಳ್ಳಾರಿ ಸೇರಿ ವಿವಿಧೆಡೆ ಸಂಚರಿಸುವ ಬಸ್‌ಗಳ ಸೇವೆ ಸ್ಥಗಿತಗೊಂಡಿತ್ತು. ಖಾಸಗಿ ಬಸ್, ಟ್ಯಾಕ್ಸಿ ಹಿಡಿದು ಪ್ರಯಾಣಿಕರು ದೂರದ ಊರುಗಳಿಗೆ ತೆರಳಿದರು.
ವಿಜಯವಾಣಿ ಚಿತ್ರ(ಎಚ್‌ವೈಆರ್ ಬಸ್ 05)
ಬಸ್ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಹಿರಿಯೂರಿನ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.
------------------------------
ಬಸ್ ಸಂಚಾರ ಸ್ಥಗಿತದಿಂದ ಪ್ರಯಾಣಿಕರ ಪರದಾಟ
ಭರಮಸಾಗರ
ರಾಜ್ಯ ಸಾರಿಗೆ ಒಕ್ಕೂಟಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ ಮುಷ್ಕರದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡಿದರು.
ಬೆಳಗ್ಗೆ ಐದರಿಂದಲೇ ಬಸ್ ನಿಲ್ದಾಣದ ಬಳಿ ಕಾದು ನಿಂತಿದ್ದ ಪ್ರಯಾಣಿಕರು ವಾಹನಗಳು ಬಾರದ ಕಾರಣ ವಾಪಸಾದರು. ಮಂಗಳವಾರ ವಾರದ ಸಂತೆ ಇದ್ದುದರಿಂದ ಬೇರೆ ಕಡೆಯಿಂದ ಬರುವ ವ್ಯಾಪಾರಿಗಳಿಗೆ ತೊಂದರೆ ಆಗಿತ್ತು. ಬಸ್‌ಗಳು ಮತ್ತು ಪ್ರಯಾಣಿಕರು ಇಲ್ಲದೆ ನಿಲ್ದಾಣ ಬಿಕೋ ಎನ್ನುತ್ತಿತ್ತು.
ಬೆಳಗ್ಗೆ 10 ಗಂಟೆ ನಂತರ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿ ಪ್ರಯಾಣಿಕರಿಗೆ ಸೇವೆ ಒದಗಿಸಿದವು. ಚಿತ್ರದುರ್ಗ ಮತ್ತು ದಾವಣಗೆರೆ ಕಡೆಗೆ ಖಾಸಗಿ ಬಸ್‌ಗಳು ಪ್ರಯಾಣಿಕರನ್ನು ಕರೆದೊಯ್ದವು. ಆದರೆ, ಗ್ರಾಮೀಣ ಭಾಗದ ಜನತೆಗೆ ಮುಷ್ಕರದ ಬಿಸಿ ತಟ್ಟಿತು. ಕೆಲವರು ಆಟೋರಿಕ್ಷಾಗಳನ್ನೇರಿ ಊರು ಕಡೆ ಹೊರಟರು. ಶಾಲಾ ಶಿಕ್ಷಕರು, ಇಲಾಖೆಗಳ ಸಿಬ್ಬಂದಿ ದ್ವಿಚಕ್ರ ವಾಹನ, ಕಾರುಗಳಲ್ಲಿ ಕೆಲಸಕ್ಕೆ ತೆರಳಿದರು.
ಚಿತ್ರ: ಬಿಆರ್‌ಎಂ ಬಸ್ 5
ಬಸ್ ಸಂಚಾರ ಸ್ಥಗಿತದಿಂದ ಬಿಕೋ ಎನ್ನುತ್ತಿದ್ದ ಭರಮಸಾಗರದ ಬಸ್ ನಿಲ್ದಾಣ.
----------------------------