

ಬೇಲೂರು: ಪಟ್ಟಣದಲ್ಲೇ ಬಸ್ ಡಿಪೋ ಇದ್ದರೂ ಸರಿಯಾದ ಸಮಯಕ್ಕೆ ಬಸ್‌ಗಳು ಬಾರದ ಪರಿಣಾಮ ಬೇಲೂರು-ಅರಸೀಕೆರೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಪರದಾಡುವಂತಾಯಿತು.
ದೂರದೂರುಗಳಿಂದ ಚನ್ನಕೇಶವಸ್ವಾಮಿ ದೇಗುಲ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣ ಸಮೀಪ ಬಸ್ ಡಿಪೋ ತೆರೆಯಬೇಕೆಂದು ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸಾಕಷ್ಟು ವರ್ಷಗಳ ಹಿಂದೆ ಪ್ರತಿಭಟನೆ ನಡೆಸಿದ ಕಾರಣ ಸರ್ಕಾರ ಪಟ್ಟಣ ಸಮೀಪದಲ್ಲಿ ಬಸ್ ಡಿಪೋ ತೆರೆದು ಅಲ್ಪಸ್ವಲ್ಪ ಬಸ್‌ಗಳನ್ನು ಕಳುಹಿಸಿ ತಾಲೂಕಿನ ಜನತೆಯ ಕಣ್ಣೊರೆಸುವ ಕೆಲಸ ಮಾಡಿತ್ತು. ಆದರೆ ಇದು ಹೀಗೆಯೇ ಸಾಗುತ್ತಲೇ ಇದೆ. ಇನ್ನು ಕೆಲ ಸಂದರ್ಭದಲ್ಲಿ ಬೇರೆ ಬೇರೆ ಡಿಪೋಗಳಿಂದ ಬರ ಬೇಕಾದ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದ ಸಂದರ್ಭ ಪ್ರಯಾಣಿಕರಿಗೆ ಸಾಕಷ್ಟು ಸಂದರ್ಭಗಳಲ್ಲಿ ತೊಂದರೆಯಾಗಿದೆ.
ಈಗಲೂ ಈ ಸಮಸ್ಯೆಯಿದ್ದರೂ ಇಲ್ಲಿನ ಡಿಪೋ ವ್ಯವಸ್ಥಾಪಕರಾಗಲಿ, ಕೆಎಸ್‌ಆರ್‌ಟಿಸಿ ಡಿಸಿ ಅಥವಾ ಡಿಟಿಒಗಳಾಗಲಿ ತಲೆ ಕೆಡಿಸಿ ಕೊಳ್ಳದ ಕಾರಣ ಇಂದಿಗೂ ಬಸ್‌ಗಳಿಲ್ಲದೆ ಪ್ರಯಾಣಿಕರು ಎಂದಿನಂತೆ ಅಧಿಕಾರಿಗಳ ವಿರುದ್ಧ ಶಾಪ ಹಾಕಿಕೊಂಡೇ ಪ್ರಯಾಣಿಸುತಿದ್ದಾರೆ. ಈ ನಡುವೆ ಬುಧವಾರ ಬೇಲೂರು-ಅರಸೀಕೆರೆ ಮಾರ್ಗವಾಗಿ 5, 5.30, 5.45, 6 ಗಂಟೆಗೆ ನಿಲ್ದಾಣದಿಂದ ಹೊರಡಬೇಕಾದ ಬಸ್‌ಗಳು ನಿಲ್ದಾಣಕ್ಕೆ ಬಾರದ ಕಾರಣ ಸಂಜೆ 5ರಿಂದ 6.15ರವರೆಗೂ ಪ್ರಯಾಣಿಕರು, ಮಹಿಳೆಯರು, ಮಕ್ಕಳು, ವೃದ್ಧರು ಪರದಾಡುವಂತಾಯಿತು.
ಈ ನಡುವೆ ಹೆಸರೇಳಲಿಚ್ಛಿಸದ ವ್ಯಕ್ತಿಯೊಬ್ಬರು ಅರಸೀಕೆರೆ ಮತ್ತು ಬೇಲೂರು ಡಿಪೋ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಬೇಲೂರಿಗೆ ಬರಬೇಕಾದ ಮೂರು ಬಸ್‌ಗಳು ಬೇರೆ ಮಾರ್ಗದಲ್ಲಿ ಸಂಚರಿಸುತ್ತಿರುವುದರಿಂದ ಹಾಗೂ ಕೆಲವೊಂದು ತಾಂತ್ರಿಕ ಕಾರಣದಿಂದ ಕೆಟ್ಟಿದ್ದು, ಬೇಲೂರಿಗೆ ಬರುವುದಿಲ್ಲ ಎಂಬ ಉತ್ತರ ಸಿಕ್ಕಿದೆ. ಇದರಿಂದ ಪ್ರಯಾಣಿಕರು ನಿಲ್ದಾಣದಲ್ಲೇ ಗಂಟೆಗಟ್ಟಲೇ ಕಾಯುವಂತ್ತಾಗಿತ್ತು. ಆದರೆ 6.30ರ ನಂತರ ಬಸ್ ಬಂದಿದ್ದರಿಂದ ಪ್ರಯಾಣಿಕರು ನೂಕು ನುಗ್ಗಲಿನಲ್ಲಿ ಬಸ್ ಹತ್ತಿದರೆ, ಇನ್ನೂ ಕೆಲವರು ಹತ್ತಲಾಗದೆ ನಂತರ ಬಂದ ಬಸ್ಸನ್ನು ಕಾದು ಹತ್ತಿದರು.
ಕರೆ ಸ್ವೀಕರಿಸದ ಅಧಿಕಾರಿ ವರ್ಗ: ಪ್ರಯಾಣಿಕರಿಗಾದ ತೊಂದರೆ ಕುರಿತು ಮಾಹಿತಿ ಪಡೆಯಲು ಡಿಪೋ ವ್ಯವಸ್ಥಾಪಕರು ಮತ್ತು ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಡಿಸಿಗೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ನಿರ್ಲಕ್ಷ್ಯ ತೋರುವ ಮತ್ತು ಪ್ರಯಾಣಿಕರಿಗೆ ಮಾಹಿತಿ ನೀಡದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.