

ಮಂಗಳೂರು: ಉರ್ವ ಸ್ಟೋರ್ ಬಳಿ ಭಾನುವಾರ ತಡರಾತ್ರಿ ಆಟೋ ಪಲ್ಟಿಯಾಗಿ ಪ್ರಯಾಣಿಕ, ಮೂಲತಃ ಹಾಸನ ಬೇಲೂರು ಅಡಗೂರು ನಿವಾಸಿ, ಪ್ರಸ್ತುತ ಉರ್ವ ಅಶೋಕನಗರ ನಿವಾಸಿ ಶ್ರೀಧರ್ ಬಿ.(29) ಎಂಬುವರು ಮೃತಪಟ್ಟಿದ್ದಾರೆ.
ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಸಂಪರ್ಕಾಧಿಕಾರಿಯಾಗಿದ್ದ ಶ್ರೀಧರ್ ಅಶೋಕನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಭಾನುವಾರ ಬಾಡಿಗೆ ಮನೆಯೊಂದನ್ನು ನೋಡಲು ಗೆಳೆಯನ ಜತೆ ಆಟೋದಲ್ಲಿ ತೆರಳುತ್ತಿದ್ದರು. ಉರ್ವ ಸ್ಟೋರ್ ಬಳಿ ಪಾದಚಾರಿಯೊಬ್ಬರು ಏಕಾಏಕಿ ರಸ್ತೆ ದಾಟಿದ್ದು, ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಆಟೋ ಪಲ್ಟಿಯಾಗಿತ್ತು. ಶ್ರೀಧರ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರ ಮೇಲೆ ರಿಕ್ಷಾ ಬಿದ್ದಿದೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅದಾಗಲೇ ಮೃತಪಟ್ಟಿದ್ದರು.
ಆಟೋ ಚಾಲಕ ಹಾಗೂ ಇನ್ನೊಬ್ಬ ಪ್ರಯಾಣಿಕನಿಗೆ ಯಾವುದೇ ಗಾಯವಾಗಿಲ್ಲ. ಶ್ರೀಧರ್ ಅವರಿಗೆ ವರ್ಷದ ಹಿಂದೆ ಮದುವೆಯಾಗಿತ್ತು. ಸೋಮವಾರ ಬೆಳಗ್ಗೆ ಕುಟುಂಬಿಕರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.