ನಗರದಲ್ಲಿ ಅಪ್ಪೆ ಆಟೋ ಹಾವಳಿ ತಪ್ಪಿಸಿ: ರಾಜೀವ್‌ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆ ಅಧ್ಯಕ್ಷ ಕೃಷ್ಣ ಮನವಿ

Passenger Auto Drivers Press Conference Mandya
Published on

ಮಂಡ್ಯ: ನಗರದಲ್ಲಿ ಅಪ್ಪೆ ಆಟೋಗಳ ಹಾವಳಿ ಮಿತಿ ಮೀರಿದೆ. ಇದರಿಂದಾಗಿ ಪ್ಯಾಸೆಂಜರ್ ಆಟೋ ಚಾಲಕರಿಗೆ ನಷ್ಟವುಂಟಾಗಿದೆ. ಆದ್ದರಿಂದ ಕೂಡಲೇ ಅಪ್ಪೆ ಆಟೋಗಳನ್ನು ನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ಕರ್ನಾಟಕ ರಾಜೀವ್‌ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆ ಜಿಲ್ಲಾಧ್ಯಕ್ಷ ಕೃಷ್ಣ ಮನವಿ ಮಾಡಿದರು.

ಅಪ್ಪೆ ಆಟೋಗಳಿಂದಾಗಿ ನಿತ್ಯ ಸಾಮಾನ್ಯ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ. ಈ ಮೊದಲು ಅಪ್ಪೆ ಆಟೋಗಳು ನಗರ ಮತ್ತು ಪಟ್ಟಣಗಳ ಪ್ರವೇಶಕ್ಕೆ ಅನುಮತಿ ಇರಲಿಲ್ಲ. ಈಗ ಅವುಗಳಿಗೆ ಅನುಮತಿ ಇಲ್ಲದಿದ್ದರೂ ಸಹ ನಗರ ಪ್ರದೇಶಗಳಲ್ಲಿ ಚಲಿಸುತ್ತಾ ತೊಂದರೆ ನೀಡುತ್ತಿದ್ದಾರೆ. ಇದರಿಂದಾಗಿ ನಿತ್ಯವೂ ಆಟೋ ಚಾಲಕರ ನಡುವೆ ಘರ್ಷಣೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಸಾರಿಗೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆವಿಗೂ ಅದು ಕಾರ್ಯಗತವಾಗಿಲ್ಲ. ಮಂಡ್ಯ ನಗರದಲ್ಲಿ ಪರವಾನಗಿ ಹೊಂದಿರುವ 4 ಸಾವಿರಕ್ಕೂ ಹೆಚ್ಚು ಆಟೋಗಳಿವೆ. ಹೊಸದಾಗಿ ಪರವಾನಗಿ ನೀಡುತ್ತಿರುವುದರಿಂದ ಹಾಲಿ ಇರುವ ಆಟೋ ಚಾಲಕರಿಗೆ ಅನಾನುಕೂಲವಾಗುತ್ತಿದೆ ಎಂದು ದೂರಿದರು.

ಮಂಡ್ಯ ನಗರ ಮತ್ತು ತಾಲೂಕು ಕೇಂದ್ರಗಳ ವ್ಯಾಪ್ತಿಯಲ್ಲಿ ಅಪ್ಪೆ ಆಟೋಗಳನ್ನು ನಿರ್ಬಂಧಿಸಬೇಕು. ಮಂಡ್ಯ ನಗರ ಹಾಗೂ ತಾಲೂಕು ಕೇಂದ್ರದ ವ್ಯಾಪ್ತಿಯಲ್ಲಿ ಹೊಸದಾಗಿ ನೀಡುವ ಪರವಾನಗಿ ನಿಲ್ಲಿಸಬೇಕು. ಮಂಡ್ಯ ಹೊರ ವಲಯಗಳಿಂದ ಬರುವ ದಾಖಲಾತಿ ಇಲ್ಲದ ಆಟೋಗಳನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ನಿವೇಶನ ರಹಿತ ಆಟೋ ಚಾಲಕರಿಗೆ ಸರ್ಕಾರದ ವತಿಯಿಂದ ನಿವೇಶನ ನೀಡುವುದು, ಟ್ಯಾಕ್ಸಿ, ಕಾರುಗಳಿಗೆ ಜಿಪಿಎಸ್ ಅಳವಡಿಸುವುದನ್ನು ರದ್ದುಗೊಳಿಸಬೇಕು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸಾರಿಗೆ ಅಧಿಕಾರಿ ಕಚೇರಿ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಸಂಘದ ಗೌರವಾಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಎಂ.ರಾಜು, ಉಪಾಧ್ಯಕ್ಷ ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಕುಮಾರ, ಬೋರಲಿಂಗ, ಶಶಿ, ಜಯಶಂಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net