ಬಸ್‌ಗಳಿಲ್ಲದೆ ಪ್ರಯಾಣಿಕರ ಪರದಾಟ

oppo_2
ಹನೂರಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸೋಮವಾರ ಜನರು ಹಾಗೂ ವಿದ್ಯಾರ್ಥಿಗಳು ಬಸ್‌ಗಾಗಿ ಕಾದು ಕುಳಿತಿರುವುದು.
Published on

ಹನೂರು : ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ ಜನರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾನುವಾರ ವಾಪಸಾಗುವ ವೇಳೆ ಬಸ್ಸಿಗಾಗಿ ತುಂಬ ತೊಂದರೆ ಅನುಭವಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಹಾಗೂ ಇನ್ನಿತರ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜನ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮಗಳಿಗೆ ಆಗಮಿಸಿದ್ದರು. ಹಾಗೆಯೇ ಮೈಸೂರಿನ ವಿದ್ಯಾರ್ಥಿ ನಿಲಯಗಳಲ್ಲಿ ವಾಸವಿದ್ದ ವಿವಿಧ ಕಾಲೇಜುಗಳು ಹೆಚ್ಚು ವಿದ್ಯಾರ್ಥಿಗಳು ಸಹ ಆಗಮಿಸಿದ್ದರು. ಹಬ್ಬ ಮುಗಿಸಿ ಸೋಮವಾರ ಬೆಳಗ್ಗೆಯೇ ತಮ್ಮ ಸ್ವ ಸ್ಥಾನಗಳಿಗೆ ವಾಪಸಾಗಲು ಪಟ್ಟಣ ಹಾಗೂ ಗ್ರಾಮಗಳ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ತೆರಳುವವರ ಜನರ ಸಂಖ್ಯೆ ಹೆಚ್ಚಿದ್ದ ಪರಿಣಾಮ ಬಸ್‌ಗಳು ಕಿಕ್ಕಿರಿದು ತುಂಬಿದ್ದವು. ಆದರೂ ಕೆಲವರು ನೂಕು ನುಗ್ಗಲಿನಲ್ಲಿಯೇ ತೆರಳಿ ನಿಂತುಕೊಂಡೇ ಪ್ರಯಾಣ ಬೆಳೆಸಿದರು.

ಇನ್ನು ಕೆಲವರು ಬಸ್ ನಿಲ್ದಾಣಗಳಲ್ಲಿ ಬಸ್‌ಗಾಗಿ ಕಾದು ನಿಲ್ಲುವಂತಾಗಿತ್ತು. ಇದರಿಂದ ವೃದ್ಧರು ಹಾಗೂ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸಿದರೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತೆರಳಲು ಪರದಾಡುವಂತಾಯಿತು. ಬೆಳಗ್ಗೆ 10 ಗಂಟೆಯ ತನಕವೂ ಬಸ್‌ಗಳು ಕಿಕ್ಕಿರಿದು ತುಂಬಿದ್ದವು. ತಾಲೂಕು ಕೇಂದ್ರ ಹನೂರಿನಲ್ಲಿ ಬಸ್ ಡಿಪೋ ಇಲ್ಲದ ಕಾರಣ ಜನರ ಸಂಖ್ಯೆಗೆ ಅನುಗುಣವಾಗಿ ಬಸ್ ಬಿಡಲು ಸಾಧ್ಯವಿಲ್ಲದಂತಾಯಿತು. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪವೂ ಕೇಳಿ ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net