

ರಾಯಚೂರು: ಮೂಲ ಆಯುರ್ವೇದ ಪದ್ಧತಿಯನ್ನು ಉಳಿಸಿ, ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಮುಟ್ಟಿಸುವ ಅಗತ್ಯವಿದ್ದು, ಜನರ ಆರೋಗ್ಯ ಕಾಪಾಡುವ ಮೂಲಕ ಪಾರಂಪರಿಕ ವೈದ್ಯರು ಮುಂಚೂಣಿಯಲ್ಲಿ ಗುರುತಿಸಿಕೊಳ್ಳಬೇಕು ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತಿನಿಂದ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೋಗಗಳಿಗೆ ನಾವು ಬಲಿಯಾಗುತ್ತಿದ್ದು, ಕಡಿಮೆ ಖರ್ಚಿನಲ್ಲಿ ಆಯುರ್ವೇದ ಔಷಧಗಳಿಂದ ಅವುಗಳನ್ನು ಗುಣಪಡಿಸಬಹುದಾಗಿದೆ ಎಂದರು.
ಇಂದು ಸಾಕಷ್ಟು ರೋಗಗಳಿಗೆ ಪಾರಂಪರಿಕ ಚಿಕಿತ್ಸೆ ಮೂಲಕ ಗುಣಪಡಿಸಬಹುದಾಗಿದೆ. ಆದರೆ ನಾವು ಲಕ್ಷಾಂತರ ರೂ. ಖರ್ಚು ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಖರ್ಚು ಮಾಡುತ್ತಿದ್ದೇವೆ. ಗಿಡಮೂಲಿಕೆಗಳಲ್ಲಿ ಶಕ್ತಿಯಿದ್ದು, ಅವುಗಳ ಪ್ರಯೋಜನ ಪಡೆಯಬಹುದಾಗಿದೆ.
ಹಿಂದೆ ಗಿಡಮೂಲಿಕೆಗಳನ್ನು ಬಳಸಿ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡಿ ರೋಗಗಳನ್ನು ಗುಣಪಡಿಸಲಾಗುತ್ತಿತ್ತು. ಆ ಪಾರಂಪರಿಕ ವೈದ್ಯ ಪದ್ಧತಿಯನ್ನು ಇಂದು ಉಳಿಸಿ, ಬೆಳೆಸಬೇಕಾದ ಅಗತ್ಯವಾಗಿದೆ. ಪಾರಂಪರಿಕ ವೈದ್ಯರು ಸಂಘಟಿತರಾಗಿ ಮುಂದಿನ ಪೀಳಿಗೆಗೆ ಪದ್ಧತಿ ಮುಟ್ಟುವಂತೆ ಮಾಡಬೇಕು ಎಂದು ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಾರ್ಯಕ್ರಮದಲ್ಲಿ ಇಲಕಲ್‌ನ ಶಿವಶಕ್ತಿ ಪೀಠದ ಬಸವಪ್ರಸಾದ ಸ್ವಾಮೀಜಿ, ಪರಿಷತ್ ಅಧ್ಯಕ್ಷ ಆನಂದ ಹೆರೂರು, ಜಿಲ್ಲಾಧ್ಯಕ್ಷ ಎಜಾಜ್ ಹುಸೇನ್ ಅನ್ವರ್, ಪದಾಕಾರಿಗಳಾದ ಕೃಷ್ಣಪ್ಪ ತಾತ, ಯುಸ್ೂ ಖಾನ್, ಅಸ್ಲಂ ಪಾಶಾ, ರಾಮಣ್ಣ ಮರ್ಚೆಡ್, ನಾಗೇಶ ಪೂಜಾರಿ, ಖಾಜಾ ಹುಸೇನ್, ಸತೀಶಕುಮಾರ ಉಪಸ್ಥಿತರಿದ್ದರು.