ಪಶು ಸಖಿಯರು ನಿಸ್ವಾರ್ಥ ಸೇವೆ ಮಾಡಲಿ

09Jaggu3
ಬೆಳಗಾವಿ ಪಶು ಆಸ್ಪತ್ರೆಯ ಆವರಣದ ರೈತ ಭವನದಲ್ಲಿ ಆಯೋಜಿಸಿದ್ದ ‘ಪಶುಸಖಿಯರಿಗೆ ತರಬೇತಿ ಕಾರ್ಯಾಗಾರ’ದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಶುಸಖಿಯರಿಗೆ ಪ್ರಥಮ ಚಿಕಿತ್ಸೆ ಕಿಟ್ ವಿತರಿಸಿದರು. ಡಾ. ರಾಜೀವ್ ಕೂಲೇರ, ಡಾ. ಆನಂದ ಪಾಟೀಲ, ಡಾ. ಎಂ.ಬಿ. ಪಾಟೀಲ ಇದ್ದರು.
Published on

ಬೆಳಗಾವಿ: ‘ಪಶು ಸಖಿ’ ಎನ್ನುವುದು ರಾಜ್ಯ ಸರ್ಕಾರದ ವಿನೂತನ ಮತ್ತು ಅತ್ಯಂತ ಉಪಯುಕ್ತ ಯೋಜನೆಗಳಲ್ಲಿ ಒಂದಾಗಿದ್ದು, ಪ್ರತಿ ಮನೆಗೆ ತೆರಳಿ ಜಾನುವಾರು ಸಾಕಿದವರಿಗೆ ಸರ್ಕಾರಿ ಸೌಲಭ್ಯ ತಲುಪಿಸುವ, ಅಗತ್ಯ ಮಾಹಿತಿ ಒದಗಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಜಿಪಂ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ನಗರದ ಪಶು ಆಸ್ಪತ್ರೆಯ ಆವರಣದ ರೈತ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಪಶುಸಖಿಯರಿಗೆ ತರಬೇತಿ ಕಾರ್ಯಾಗಾರ’ದಲ್ಲಿ ಪ್ರಥಮ ಚಿಕಿತ್ಸೆ ಕಿಟ್ ವಿತರಿಸಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಗಳು ಪಶು ಸಾಕಾಣಿಕೆ ಮಾಡುವವರಿಗೆ ಸರಿಯಾಗಿ ತಲುಪುತ್ತಿಲ್ಲ ಎನ್ನುವ ಕಾರಣಕ್ಕೆ ಪಶು ಸಖಿಯರು ಎನ್ನುವ ಹೊಸ ಪರಿಕಲ್ಪನೆ ರೂಪಿಸಲಾಗಿದೆ. ಪಶು ಸಂಗೋಪನೆ ಗ್ರಾಮೀಣ ಜನರ ಜೀವನಾಡಿ. ಕೃಷಿಯಷ್ಟೇ ಪಶು ಸಂಗೋಪನೆಯೂ ಮಹತ್ವವಾದ ಉದ್ಯೋಗ. ಬಹಳಷ್ಟು ಕುಟುಂಬ ಪಶುಸಂಗೋಪನೆಯ ಮೇಲೆಯೇ ಅವಲಂಬಿತವಾಗಿವೆ. ಅಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಜಾನುವಾರುಗಳು ಮೃತಪಟ್ಟರೆ ಅವರ ಬದುಕೇ ಅತಂತ್ರವಾಗುತ್ತದೆ. ಹೀಗಾಗಿ ಜಾನುವಾರುಗಳಿಗೆ ರೋಗ ಬಾರದಂತೆ ಮುಂಜಾಗ್ರತವಾಗಿ ತಿಳಿವಳಿಕೆ ನೀಡುವುದು, ರೋಗ ಬಂದರೆ ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಪಶು ಸಖಿಯರ ಜವಾಬ್ದಾರಿ ಎಂದರು.

ರೈತರಿಗೆ ಹೊಸ ಹೊಸ ತಂತ್ರಜ್ಞಾನ ತಲುಪಿಸುವ ಕೆಲಸ ಮಾಡಬೇಕು, ಸುಧಾರಿತ ಮೇವಿನ ಬೆಳೆಗಳ ಮತ್ತು ಜಾನುವಾರು ಆಹಾರ ಪದ್ಧತಿಗಳ ಕುರಿತು ಮಾಹಿತಿ ನೀಡಬೇಕು. ಜಾನುವಾರುಗಳ ಚಿಕಿತ್ಸೆಗೆ ವ್ಯವಸ್ಥೆ, ಕೃತಕ ಗರ್ಭಧಾರಣೆ ಮತ್ತು ತಳಿ ಅಭಿವೃದ್ಧಿ, ಜಂತುನಾಶಕ ವಿತರಣೆ, ಲಸಿಕಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಈ ಹಿಂದೆ ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರು ಮಾಲೀಕರಿಗೆ ಪರಿಹಾರ ಹಣ ಕೊಡಿಸುವ ವ್ಯವಸ್ಥೆ ಮಾಡಿಸಿದ್ದೆೆ. ಸರ್ಕಾರದಿಂದ ಏನಾದರೂ ಹಣ ಬಿಡುಗಡೆಯಾಗಬೇಕಿರುವುದು ಬಾಕಿ ಇದ್ದರೆ ಸಂಬಂಸಿದ ಸಚಿವರೊಂದಿಗೆ ಮಾತನಾಡಿ ಬಿಡುಗಡೆ ಮಾಡಿಸುತ್ತೇನೆ ಎಂದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ರಾಜೀವ್ ಕೂಲೇರ, ಮುಖ್ಯ ಪಶು ವೈದ್ಯಾಕಾರಿ ಡಾ. ಆನಂದ ಪಾಟೀಲ, ಡಾ. ಎಂ.ಬಿ. ಪಾಟೀಲ, ಭಾಗ್ಯಶ್ರೀ ಬಿ.ಎಚ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net