

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ನಾಲ್ಕೂ ತಾಲೂಕುಗಳನ್ನೊಳಗೊಂಡಂತೆ 24 ಪಶು ಆಸ್ಪತ್ರೆಗಳು ಮೇಲ್ದರ್ಜೆಗೇರುವ ಕಾಲ ಸನ್ನಿಹಿತವಾಗಿದೆ.
ಕಳೆದ ನಾಲ್ಕೈದು ವರ್ಷದಿಂದ ಹೈನುಗಾರಿಕೆಯಲ್ಲಿ ಛಾಪು ಮೂಡಿಸುತ್ತಿರುವ ಜಿಲ್ಲೆಯಲ್ಲಿ ಪಶು ಆಸ್ಪತ್ರೆಗಳ ಅವಶ್ಯಕತೆಯನ್ನು ಮನಗಂಡಿರುವ ಪಶುಪಾಲನ ಇಲಾಖೆ 24 ಆಸ್ಪತ್ರೆಗಳನ್ನು ಗುರುತಿಸಿ ಅವುಗಳನ್ನು ಮೇಲ್ದರ್ಜೆಗೇರಿಸುವ ಸಂಬಂಧ ಉಸ್ತುವಾರಿ ಸಚಿವರಿಗೆ ವರದಿ ಸಲ್ಲಿಸಿದೆ. ಇದನ್ನು ಪರಿಶೀಲನೆ ನಡೆಸಿರುವ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸಮ್ಮತಿ ಸೂಚಿಸಿದ್ದು, ಕ್ಯಾಬಿನೆಟ್‌ನಲ್ಲಿ ಅನುಮೋದನೆ ಪಡೆಯುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಹೈನುಗಾರರಿಗೆ ಸಿಹಿಸುದ್ದಿ ಹೊರಬೀಳಲಿದೆ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಹೆಚ್ಚು: ನಾಲ್ಕೂ ತಾಲೂಕುಗಳ ಪೈಕಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 13 ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ಥಾವನೆ ಸರ್ಕಾರದ ಮುಂದಿದೆ. ಅದೇ ರೀತಿ ದೇವನಹಳ್ಳಿ ತಾಲೂಕಿನಲ್ಲಿ 3, ನೆಲಮಂಗಲ 2 ಹಾಗೂ ಹೊಸಕೋಟೆಯಲ್ಲಿ 3 ಆಸ್ಪತ್ರೆಗಳನ್ನು ಗುರುತಿಸಲಾಗಿದೆ.
ನೂತನ ಕಟ್ಟಡಗಳಿಗೂ ಅಸ್ತು: ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಜತೆಗೆ 20ಕ್ಕೂ ಹೆಚ್ಚು ಹಳೇಯ ಪಶು ಆಸ್ಪತ್ರೆ ಕಟ್ಟಡಗಳನ್ನು ಕೆಡವಿ ನೂತನವಾಗಿ ಸುಸಜ್ಜಿತ ಕಟ್ಟಡಗಳ ನಿರ್ಮಾಣಕ್ಕೂ ಪಶುಪಾಲನಾ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇತ್ತೀಚಿಗೆ ದೇವನಹಳ್ಳಿ ತಾಲೂಕು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಪಶುಪಾಲನಾ ಇಲಾಖೆ ಉಪನಿರ್ದೇಶಕ ಜಗದೀಶ್ ಅವರು ಮಾಹಿತಿ ನೀಡಿದರು. ಇದಕ್ಕೆ ಸಮ್ಮತಿ ಸೂಚಿಸಿದ ಉಸ್ತುವಾರಿ ಸಚಿವರು ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದರು.
ವೈದ್ಯರ ಕೊರತೆ ಇರಲ್ಲ: ಜಿಲ್ಲೆಯಲ್ಲಿ ಕೇಂದ್ರ ಕಚೇರಿ ಸೇರಿ ಒಟ್ಟು 106 ಪಶು ಇಲಾಖೆ ಕಟ್ಟಡಗಳಿದ್ದು, ಇದರಲ್ಲಿ ಸಂಚಾರ ಪಶು ಆಸ್ಪತ್ರೆ ಸೇರಿ 100 ಪ್ರಾಥಮಿಕ ಹಾಗೂ ಪಶು ವೈದ್ಯಕೀಯ ಆಸ್ಪತ್ರೆಗಳಿವೆ. ಇದರಲ್ಲಿ ಕೆಲವೊಂದು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದುರಾಗಿದ್ದು, ಹೈನುಗಾರರಿಗೆ ಸಾಕಷ್ಟು ತೊಂದರೆ ಎದುರಾಗುತ್ತಿದೆ. ಇಂಥ ಆಸ್ಪತ್ರೆಗಳಲ್ಲಿ ಕೇವಲ ಹೆಲ್ತ್ ಇನ್‌ಸ್ೆಕ್ಟರ್‌ಗಳಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದರೆ ಖಾಯಂ ವೈದ್ಯರನ್ನು ನೇಮಿಸಲಾಗುತ್ತದೆ ಜತೆಗೆ ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕರು ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಇದು ಹೈನುಗಾರರಿಗೆ ಬಹಳ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆ, ಚಿಕಿತ್ಸೆಗೆ ಅನುಕೂಲ: ಇತ್ತೀಚಿನ ದಿನಗಳಲ್ಲಿ ಹಾಲು ಉತ್ಪಾದನೆಯಲ್ಲಿ ಸಾಧನೆ ಮಾಡುತ್ತಿರುವ ಜಿಲ್ಲೆಯ ಹೈನುಗಾರರು ಅಷ್ಟೇ ಪ್ರಮಾಣದಲ್ಲಿ ಜಾನುವಾರುಗಳ ರಕ್ಷಣೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಜಾನುವಾರುಗಳನ್ನು ಕಾಡುವ ಚರ್ಮಗಂಟು, ಕಾಲುಬಾಯಿ ರೋಗ, ಕರಳುಬೇನೆ ಮತ್ತಿತರ ಕಾಯಿಲೆಗಳು ಹೈನುಗಾರರನ್ನು ಹೈರಾಣಾಗಿಸುತ್ತಿದೆ, ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸುವುದು ಸೇರಿ ಅನಾರೋಗ್ಯಗೊಂಡ ವೇಳೆ ತಕ್ಷಣ ಚಿಕಿತ್ಸೆ ಕೊಡಿಸುವುದು ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಪಶು ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಸೇವೆ ದೊರಕಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ರೈತರ ದೂರು:
ನಾಲ್ಕೂ ತಾಲೂಕುಗಳನ್ನೊಳಗೊಂಡಂತೆ ಜಿಲ್ಲೆಯಲ್ಲಿ ಪ್ರಸ್ತುತ 24 ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಸಂಬಂಧ ಉಸ್ತುವಾರಿ ಸಚಿವರಿಗೆ ವರದಿ ನೀಡಲಾಗಿದೆ. ಉಸ್ತುವಾರಿ ಸಚಿವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇದನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಶೀಘ್ರ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಇದರಿಂದ ಜಿಲ್ಲೆಯ ಹೈನುಗಾರರಿಗೆ ಬಹಳ ಅನುಕೂಲವಾಗಲಿದೆ.
ಡಾ.ಜಗದೀಶ್, ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ